\id EST - Biblica® Open Kannada Contemporary Version \ide UTF-8 \h ಎಸ್ತೇರಳು \toc1 ಎಸ್ತೇರಳು \toc2 ಎಸ್ತೇರಳು \toc3 ಎಸ್ತೇರ \mt1 ಎಸ್ತೇರಳು \c 1 \s1 ರಾಣಿ ವಷ್ಟಿಯ ಪದಚ್ಯುತಿ \p \v 1 ಭಾರತ ದೇಶ ಮೊದಲುಗೊಂಡು ಇಥಿಯೋಪಿಯ ದೇಶದವರೆಗಿನ ನೂರ ಇಪ್ಪತ್ತೇಳು ಸಂಸ್ಥಾನಗಳನ್ನು ಅಹಷ್ವೇರೋಷನು ಆಳುತ್ತಿದ್ದನು. \v 2 ಆ ದಿವಸಗಳಲ್ಲಿ ಅರಸನಾದ ಅಹಷ್ವೇರೋಷನು ರಾಜಧಾನಿಯಾದ ಶೂಷನಿನಲ್ಲಿ ಅರಮನೆಯಲ್ಲಿರುವ ತನ್ನ ರಾಜಸಿಂಹಾಸನದ ಮೇಲೆ ಕುಳಿತಿರುವಾಗ \v 3 ತನ್ನ ಆಳಿಕೆಯ ಮೂರನೆಯ ವರ್ಷದಲ್ಲಿ ಅವನು ತನ್ನ ಸಮಸ್ತ ಶ್ರೇಷ್ಠರಿಗೂ ಅಧಿಕಾರಿಗಳಿಗೂ ಔತಣವನ್ನು ಮಾಡಿಸಿದನು. ಪಾರಸಿಯ ಮತ್ತು ಮೇದ್ಯ ದೇಶಗಳ ಸೇನಾಧಿಪತಿಗಳೂ ಪ್ರಾಂತಗಳ ಶ್ರೇಷ್ಠರೂ ಪ್ರಧಾನರೂ ಉಪಸ್ಥಿತರಿದ್ದರು. \p \v 4 ಅವನು ನೂರ ಎಂಬತ್ತು ದಿವಸಗಳವರೆಗೆ ತನ್ನ ಘನವುಳ್ಳ ರಾಜ್ಯದ ಐಶ್ವರ್ಯವನ್ನೂ ತನ್ನ ವೈಭವ ಹಾಗು ಆಡಂಬರವನ್ನು ತೋರಿಸಿದನು. \v 5 ಆ ದಿವಸಗಳು ತೀರಿದ ತರುವಾಯ ಅರಸನು ಶೂಷನಿನ ಅರಮನೆಯಲ್ಲಿರುವ ಹಿರಿಕಿರಿಯರಾದ ಸಮಸ್ತ ಜನರಿಗೂ ಏಳು ದಿವಸಗಳವರೆಗೆ ಅರಸನ ಅರಮನೆಯ ತೋಟದ ಅಂಗಳದಲ್ಲಿ ಔತಣವನ್ನು ಮಾಡಿಸಿದನು. \v 6 ಅಲ್ಲಿ ಬಿಳಿ ಕಲ್ಲಿನ ಕಂಬಗಳಿಗೆ ಬೆಳ್ಳಿಯ ಉಂಗುರಗಳಿಂದಲೂ ರಕ್ತವರ್ಣದ ನಯವಾದ ನಾರು ಹಗ್ಗಗಳಿಂದಲೂ ತೂಗು ಹಾಕಲಾಗಿದ್ದವು. ಬಿಳಿ ಹಸಿರೂ ನೀಲವರ್ಣವೂ ಆದ ತೆರೆಗಳಿದ್ದವು. ಮಂಚಗಳು ಬೆಳ್ಳಿ ಬಂಗಾರದವುಗಳಾಗಿ ಕೆಂಪು, ನೀಲಿ, ಬಿಳಿ, ಕಪ್ಪು ಬಣ್ಣಗಳ ಅಮೃತಶಿಲೆಗಳಿಂದ ರಚಿತವಾದ ನೆಲದ ಮೇಲೆ ಇಡಲಾಗಿದ್ದವು. \v 7 ಇದಲ್ಲದೆ ನಾನಾ ವಿಧವಾದ ಬಂಗಾರದ ಪಾತ್ರೆಗಳಲ್ಲಿ ಅರಸನ ಔದಾರ್ಯಕ್ಕೆ ತಕ್ಕಂತೆ ದ್ರಾಕ್ಷಾರಸವನ್ನು ಧಾರಾಳವಾಗಿ ಕುಡಿಯಲು ಕೊಟ್ಟರು. \v 8 ಮಧುಪಾನ ಸೇವನೆಯಲ್ಲಿ ಪ್ರತಿಯೊಬ್ಬನಿಗೂ ತನ್ನ ಇಚ್ಛಾನುಸಾರ ಕೊಡಬೇಕೆಂತಲೂ ಯಾರಿಗೂ ಒತ್ತಾಯ ಮಾಡಬಾರದೆಂದೂ ಸೇವಕರಿಗೆ ಅರಸನು ಆದೇಶವಿತ್ತಿದ್ದನು. \p \v 9 ಇದಲ್ಲದೆ ರಾಣಿಯಾದ ವಷ್ಟಿ ಅರಸನಾದ ಅಹಷ್ವೇರೋಷನ ಅರಮನೆಯಲ್ಲಿದ್ದ ಸ್ತ್ರೀಯರಿಗೆ ಔತಣವನ್ನು ಮಾಡಿಸಿದಳು. \p \v 10-11 ಏಳನೆಯ ದಿವಸದಲ್ಲಿ ಅರಸನಾದ ಅಹಷ್ವೇರೋಷನು ದ್ರಾಕ್ಷಾರಸದಿಂದ ಅಮಲೇರಿದಾಗ ಬಹುರೂಪವತಿಯಾದ ವಷ್ಟಿ ರಾಣಿಯ ಸೌಂದರ್ಯವನ್ನು ಜನರಿಗೂ ಪ್ರಧಾನರಿಗೂ ಪ್ರದರ್ಶಿಸುವುದಕ್ಕೆ ರಾಣಿಗೆ ರಾಜಕಿರೀಟವನ್ನು ಧರಿಸಿಕೊಂಡು ತನ್ನ ಮುಂದೆ ಕರೆದುಕೊಂಡು ಬರುವುದಕ್ಕೆ ಅರಸನಾದ ಅಹಷ್ವೇರೋಷನ ಸಮ್ಮುಖದಲ್ಲಿ ಸೇವೆ ಮಾಡುವ ಮೆಹೂಮಾನ್, ಬಿಜೆತಾ, ಹರ್ಬೋನಾ, ಬಿಗೆತಾ, ಅಬಗೆತಾ, ಜೇತರ್, ಕರಕಾಸ್ ಎಂಬ ಏಳುಮಂದಿ ಕಂಚುಕಿಗಳಿಗೆ ಹೇಳಿದನು. \v 12 ಆದರೆ ಅರಸನು ಅವರಿಂದ ಹೇಳಿ ಕಳುಹಿಸಿದ ಮಾತಿಗೆ ವಷ್ಟಿ ರಾಣಿಯು, “ನಾನು ಬರುವುದಿಲ್ಲ,” ಎಂದು ಹೇಳಿದಳು. ಆದ್ದರಿಂದ ಅರಸನು ಬಹುಕೋಪಗೊಂಡು, ರೋಷಾವೇಶನಾದನು. \p \v 13 ಆಗ ನೀತಿ ನ್ಯಾಯಗಳನ್ನು ತಿಳಿದ ಪಂಡಿತರೆಲ್ಲರೊಂದಿಗೆ ಅರಮನೆಯ ಸಂಗತಿಗಳನ್ನು ಆಲೋಚಿಸುವುದು ಅರಸನ ಪದ್ಧತಿಯಾಗಿತ್ತು. ಆದುದರಿಂದ ಅರಸನು ಕಾಲಜ್ಞಾನಿಗಳ ಸಂಗಡ ಈ ವಿಷಯವಾಗಿ ವಿಚಾರಿಸಿದನು. \v 14 ಅರಸನಿಗೆ ಬಹು ಹತ್ತಿರವಾಗಿದ್ದ ಪಾರಸಿಯ ಮತ್ತು ಮೇದ್ಯ ದೇಶಗಳ ಏಳುಮಂದಿ ಪ್ರಧಾನರಾದ ಕರ್ಷೇನಾ, ಶೆತಾರ್, ಅದ್ಮಾತಾ, ತಾರ್ಷೀಷ್, ಮೆರೆಸ್, ಮರ್ಸೆನಾ, ಮೆಮೂಕಾನ್ ಇವರ ಸಂಗಡ ಮಾತನಾಡಿದನು. ರಾಜ್ಯದಲ್ಲಿ ಇವರು ಅರಸನ ಬಳಿಗೆ ಹೋಗಲು ವಿಶೇಷ ಅನುಮತಿಪಡೆದ ಅತ್ಯಂತ ಶ್ರೇಷ್ಠರಾಗಿದ್ದರು. \p \v 15 ಅಹಷ್ವೇರೋಷನು, “ಅರಸನ ಅಧಿಕಾರಿಗಳ ಮುಖಾಂತರ ಹೇಳಿ ಕಳುಹಿಸಿದ ರಾಜಾಜ್ಞೆಯನ್ನು ಉಲ್ಲಂಘಿಸಿದ ವಷ್ಟಿ ರಾಣಿಯ ವಿರುದ್ಧ ನ್ಯಾಯದ ಪ್ರಕಾರ ಅವಳಿಗೆ ಮಾಡಬೇಕಾದ ಕ್ರಮವೇನು?” ಎಂದು ಕೇಳಿದನು. \p \v 16 ಮೆಮೂಕಾನನು ಅರಸನ ಮುಂದೆಯೂ ಪ್ರಧಾನರ ಮುಂದೆಯೂ, “ವಷ್ಟಿ ರಾಣಿಯು ಅರಸನಿಗೆ ಮಾತ್ರವಲ್ಲ ಅರಸನಾದ ಅಹಷ್ವೇರೋಷನ ಸಮಸ್ತ ಪ್ರಾಂತಗಳಲ್ಲಿರುವ ಸಮಸ್ತ ಶ್ರೇಷ್ಠರಿಗೂ ಸಮಸ್ತ ಜನರಿಗೂ ಅಪರಾಧಮಾಡಿದ್ದಾಳೆ. \v 17 ರಾಣಿಯ ವರ್ತನೆ ಇತರ ಎಲ್ಲಾ ಸ್ತ್ರೀಯರಿಗೂ ತಿಳಿದುಬರುವುದು. ‘ಅರಸನಾದ ಅಹಷ್ವೇರೋಷನು ವಷ್ಟಿರಾಣಿಯನ್ನು ತನ್ನ ಮುಂದೆ ಬರಲು ಹೇಳಿ ಕಳುಹಿಸಿದನು. ಆದರೆ ಅವಳು ಬರಲು ನಿರಾಕರಿಸಿದಳು,’ ಎಂದು ಹೇಳಿಕೊಂಡು ಅವರು ತಮ್ಮ ಗಂಡಂದಿರನ್ನೂ ತಿರಸ್ಕರಿಸುವರು. \v 18 ಇದಲ್ಲದೆ ರಾಣಿಯ ಮಾತನ್ನು ಕೇಳಿದ ಪಾರಸಿಯ ಮತ್ತು ಮೇದ್ಯ ರಾಣಿಯರೆಲ್ಲರೂ ಈ ಹೊತ್ತು ಅರಸನ ಶ್ರೇಷ್ಠರಿಗೂ ಹಾಗೆಯೇ ಹೇಳುವರು. ಹೀಗೆಯೇ ತಿರಸ್ಕಾರವೂ ರೌದ್ರವೂ ಬಹಳ ಉಂಟಾಗುವುದು. \p \v 19 “ಅರಸನಿಗೆ ಸಮ್ಮತಿಯಾದರೆ, ವಷ್ಟಿಯು ಅರಸನಾದ ಅಹಷ್ವೇರೋಷನ ಮುಂದೆ ಇನ್ನು ಮೇಲೆ ಬರಬಾರದೆಂದೂ ಅರಸನು ಅವಳ ರಾಜಸ್ಥಿತಿಯನ್ನು ಅವಳಿಗಿಂತ ಉತ್ತಮಳಾದ ಮತ್ತೊಬ್ಬಳಿಗೆ ಕೊಡಲಿ ಎಂದೂ ರಾಜಾಜ್ಞೆಯು ಹೊರಟು ಅದು ರದ್ದಾಗದ ಹಾಗೆ ಪಾರಸಿಯರ ಮತ್ತು ಮೇದ್ಯರ ಕಾನೂನುಗಳಲ್ಲಿ ಲಿಖಿತವಾಗಲಿ. \v 20 ಈ ಪ್ರಕಾರ ಅರಸನು ಮಾಡಿದ ಆಜ್ಞೆಯು ತನ್ನ ವಿಸ್ತಾರವಾದ ರಾಜ್ಯವೆಲ್ಲ ಗೊತ್ತಾದಾಗ ಸ್ತ್ರೀಯರೆಲ್ಲರೂ ಹಿರಿಯರಿಂದ ಚಿಕ್ಕವರವರೆಗೂ ತಮ್ಮ ಗಂಡಂದಿರಿಗೆ ಗೌರವಕೊಡುವರು,” ಎಂದು ಸಲಹೆ ನೀಡಿದನು. \p \v 21 ಈ ಮಾತು ಅರಸನಿಗೂ ಶ್ರೇಷ್ಠರಿಗೂ ಸರಿಯೆಂದು ತೋರಿತು. ಆದುದರಿಂದ ಅರಸನು ಮೆಮೂಕಾನ್ ಮಾತಿನಂತೆಯೇ ಮಾಡಿದನು. \v 22 ಪ್ರತಿಯೊಂದು ಕುಟುಂಬದಲ್ಲಿಯೂ ಪುರುಷನೇ ಅಧಿಕಾರ ನಡೆಸಬೇಕೆಂದೂ, ತನ್ನ ಸ್ವಜನರ ಭಾಷೆಯಲ್ಲಿಯೇ ವ್ಯವಹಾರ ನಡೆಸಬೇಕೆಂದೂ ಪ್ರಾಂತಗಳ ಹಾಗೂ ಜನಸಾಮಾನ್ಯರ ಭಾಷೆಗಳಲ್ಲಿ ಅರಸನು ಸಮಸ್ತ ಸಂಸ್ಥಾನಗಳಿಗೂ ಪತ್ರಗಳನ್ನು ಬರೆದು ಕಳುಹಿಸಿದನು. \c 2 \s1 ಎಸ್ತೇರಳು ಪಟ್ಟದ ರಾಣಿಯಾದದ್ದು \p \v 1 ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನ ಕೋಪವು ಶಾಂತವಾಗಿ ಅವನು ವಷ್ಟಿಯನ್ನೂ ಅವಳನ್ನೂ, ಅವಳ ವರ್ತನೆಯನ್ನೂ, ಅವಳಿಗೆ ವಿರೋಧವಾಗಿ ತಾನು ನೀಡಿದ ತೀರ್ಪನ್ನೂ ಜ್ಞಾಪಿಸಿಕೊಂಡನು. \v 2 ಆಗ ಅರಸನ ಸೇವೆ ಮಾಡುವ ದಾಸರು ಅವನಿಗೆ, “ಅರಸನಿಗೋಸ್ಕರ ರೂಪವತಿಯಾದ ಕನ್ಯೆಯರನ್ನು ಹುಡುಕಲಿ. \v 3 ರೂಪವತಿಯಾರಾದ ಸಮಸ್ತ ಕನ್ಯೆಯರು ರಾಜಧಾನಿಯಾದ ಶೂಷನಿಗೆ ಸ್ತ್ರೀಯರು ಇರುವ ಅರಮನೆಗೆ, ಸ್ತ್ರೀಯರ ಮೇಲೆ ಕಾವಲಾಗಿ ಇರುವ ಅರಸನ ಅಧಿಕಾರಿಗಳಾದ ಹೇಗೈ ಎಂಬವನ ವಶಕ್ಕೆ ಒಪ್ಪಿಸಲಿ. ಅರಸನು ತನ್ನ ರಾಜ್ಯದ ಸಮಸ್ತ ಪ್ರಾಂತಗಳಲ್ಲಿ ಅಧಿಕಾರಿಗಳನ್ನು ನೇಮಿಸಲಿ. ಹೇಗೈ ಅವರಿಗೆ ಸೌಂದರ್ಯವರ್ಧಕ ಸಾಧನಗಳನ್ನು ಕೊಡಲಿ. \v 4 ಅರಸನ ದೃಷ್ಟಿಗೆ ಮೆಚ್ಚಿಗೆಯಾಗಿರುವ ಕನ್ನಿಕೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ,” ಎಂದನು. ಆ ಮಾತು ಅರಸನಿಗೆ ಸರಿಕಂಡುಬಂದದ್ದರಿಂದ ಅದೇ ಪ್ರಕಾರ ಮಾಡಿದನು. \p \v 5 ಶೂಷನಿನ ಅರಮನೆಯಲ್ಲಿ ಬೆನ್ಯಾಮೀನ್ ಕುಲದ ಕೀಷನ ಮರಿಮಗನೂ, ಶಿಮ್ಮೀಯ ಮೊಮ್ಮಗನೂ, ಯಾಯೀರನ ಮಗನೂ ಆದ ಮೊರ್ದೆಕೈ ಎಂಬ ಹೆಸರುಳ್ಳ ಒಬ್ಬ ಯೆಹೂದ್ಯನಿದ್ದನು. \v 6 ಅವನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಸೆರೆಯಾಗಿ ತಂದ ಯೆಹೂದದ ಅರಸನಾಗಿರುವ ಯೆಹೋಯಾಕೀನನ\f + \fr 2:6 \fr*\fq ಯೆಹೋಯಾಕೀನ \fq*\ft ಹೀಬ್ರೂ ಭಾಷೆಯಲ್ಲಿ \ft*\fqa ಯೆಕೊನ್ಯ\fqa*\f* ಸಂಗಡ ಯೆರೂಸಲೇಮಿನಿಂದ ಸೆರೆಹಿಡಿಯಲಾದವರಲ್ಲಿ ಒಬ್ಬನಾಗಿದ್ದನು. \v 7 ಇವನು ತನ್ನ ಚಿಕ್ಕಪ್ಪನ ಮಗಳಾದ ಎಸ್ತೇರ್ ಎಂಬ ಹೆಸರನ್ನು ಪಡೆದ ಹದೆಸ್ಸಳನ್ನು ಸಾಕುತ್ತಿದ್ದನು. ಏಕೆಂದರೆ ಅವಳಿಗೆ ತಂದೆತಾಯಿಗಳು ಇರಲಿಲ್ಲ. ಈಕೆಯು ರೂಪವತಿಯಾಗಿಯೂ ಸೌಂದರ್ಯವಂತಳಾಗಿಯೂ ಇದ್ದಳು. ಅವಳ ತಂದೆತಾಯಿಗಳು ಸತ್ತು ಹೋದ ತರುವಾಯ ಮೊರ್ದೆಕೈ ಅವಳನ್ನು ತನ್ನ ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದನು. \p \v 8 ಅರಸನ ಮಾತನ್ನು ಮತ್ತು ಅವನ ಕಟ್ಟಳೆಯನ್ನು ಕೇಳಿದ ತರುವಾಯ ಶೂಷನಿನ ಅರಮನೆಯಲ್ಲಿ ಹೇಗೈಯನ ವಶಕ್ಕೆ ಅನೇಕ ಕನ್ಯೆಯರನ್ನು ಒಪ್ಪಿಸಲಾಯಿತು. ಎಸ್ತೇರಳು ಸಹ ಅರಸನ ಅರಮನೆಯಲ್ಲಿ ಸ್ತ್ರೀಯರ ಕಾವಲಿನವನಾದ ಹೇಗೈಯ ಜವಾಬ್ದಾರಿಕೆಯ ಕೋಣೆಯಲ್ಲಿ ಇದ್ದಳು. \v 9 ಎಸ್ತೇರಳು ಹೇಗೈಯ ಮೆಚ್ಚುಗೆಯನ್ನು ಗಳಿಸಿದ್ದರಿಂದ ಅವನ ಸಮ್ಮುಖದಲ್ಲಿ ಅವಳಿಗೆ ದಯೆ ದೊರಕಿತು. ಆದಕಾರಣ ಅವನು ತ್ವರೆಯಾಗಿ ಸೌಂದರ್ಯವರ್ಧಕ ಸಾಧನಗಳನ್ನೂ ಅರಸನ ಅರಮನೆಯಿಂದ ಏಳುಮಂದಿ ದಾಸಿಯರನ್ನೂ ಅವಳಿಗೆ ಕೊಟ್ಟನು. ಇದಲ್ಲದೆ ಸ್ತ್ರೀಯರಿದ್ದ ಕೋಣೆಯಲ್ಲಿ ಉತ್ತಮವಾದ ಭೋಜನಾಂಶಗಳನ್ನು ಅವಳಿಗೂ ಅವಳ ದಾಸಿಯರಿಗೂ ಕೊಟ್ಟನು. ಆಕೆಯನ್ನೂ ಮತ್ತು ಆಕೆಯ ಸೇವಕಿಯರನ್ನೂ ಅಂತಃಪುರದ ಉತ್ತಮ ಭಾಗದಲ್ಲಿರಿಸಿದನು. \p \v 10 ಆದರೆ ಎಸ್ತೇರಳು ತಾನು ಇಂಥ ದೇಶದವಳು ಮತ್ತು ಇಂಥ ಕುಟುಂಬದ ಹಿನ್ನೆಲೆಯವಳು ಎಂಬುದನ್ನು ತಿಳಿಸಲಿಲ್ಲ. ಏಕೆಂದರೆ ತಿಳಿಸಬಾರದೆಂದು ಮೊರ್ದೆಕೈ ಅವಳಿಗೆ ಆಜ್ಞಾಪಿಸಿದ್ದನು. \v 11 ಆದರೆ ಎಸ್ತೇರಳ ಕ್ಷೇಮವನ್ನೂ, ಅವಳಿಗೆ ಆಗುವಂಥಾದ್ದನ್ನೂ ತಿಳಿದುಕೊಳ್ಳುವುದಕ್ಕೆ ಮೊರ್ದೆಕೈ ಪ್ರತಿದಿನವೂ ಸ್ತ್ರೀಯರಿದ್ದ ಮನೆಯ ಅಂಗಳದ ಮುಂದೆ ತಿರುಗಾಡುತ್ತಿದ್ದನು. \p \v 12 ಒಬ್ಬೊಬ್ಬ ಕನ್ನಿಕೆಯು ಆರು ತಿಂಗಳು ಸುಗಂಧ ತೈಲದಿಂದಲೂ ಆರು ತಿಂಗಳು ಸೌಂದರ್ಯವರ್ಧಕ ಸಾಧನಗಳಿಂದಲೂ ಕನ್ಯೆಯರ ಲೇಪನಕಾಲದ ಪ್ರಕಾರ ಹನ್ನೆರಡು ತಿಂಗಳಾದ ತರುವಾಯ ಅರಸನಾದ ಅಹಷ್ವೇರೋಷನ ಬಳಿಗೆ ಪ್ರತಿಯೊಬ್ಬ ಕನ್ಯೆಯು ಹೋಗಲು ಅವರವರ ಸರದಿ ಬರುತ್ತಿತ್ತು. \v 13 ಈ ಪ್ರಕಾರ ಕನ್ಯೆಯು ಅರಸನ ಬಳಿಗೆ ಪ್ರವೇಶಿಸುವಾಗ ಸ್ತ್ರೀಯರ ಮನೆಯೊಳಗಿಂದ ತನ್ನ ಸಂಗಡ ಅರಸನ ಅರಮನೆಗೆ ಹೋಗಲು ಅವಳು ಏನು ಬೇಡುವಳೋ ಅದು ಅವಳಿಗೆ ಒದಗಿಸಲಾಗುತ್ತಿತ್ತು. \v 14 ಆಗ ಅವಳು ಸಾಯಂಕಾಲದಲ್ಲಿ ರಾಜನಿವಾಸಕ್ಕೆ ಪ್ರವೇಶಿಸಿ ಮಾರನೆಯ ದಿವಸದಲ್ಲಿ ಉಪಪತ್ನಿಗಳ ಪಾಲಕನಾದ ಶವಷ್ಗಜ ಎಂಬ ರಾಜಕಂಚುಕಿಯ ವಶದಲ್ಲಿದ್ದ ಸ್ತ್ರೀಯರ ಎರಡನೆಯ ಮನೆಗೆ ಬರಬೇಕಾಗಿತ್ತು. ಅರಸನು ಯಾರಲ್ಲಿ ಸಂತೋಷಪಟ್ಟು ಅವಳನ್ನು ಹೆಸರಿನಿಂದ ಕರೆದ ಹೊರತು ಅವಳು ಪುನಃ ಅರಸನ ಬಳಿಗೆ ಹೋಗಬಾರದು. \p \v 15 ಮೊರ್ದೆಕೈಯ ದತ್ತುಮಗಳೂ, ಅವನ ಚಿಕ್ಕಪ್ಪನಾದ ಅಬೀಹೈಲನ ಮಗಳೂ ಆದ ಎಸ್ತೇರಳು ಅರಸನ ಬಳಿಗೆ ಹೋಗಲು ಸರದಿ ಬಂದಾಗ, ಸ್ತ್ರೀಯರ ಪಾಲಕನೂ ರಾಜಕಂಚುಕಿಯೂ ಆದ ಹೇಗೈ ನೇಮಿಸಿದ್ದನ್ನೇ ಹೊರತು ಬೇರಾವುದನ್ನೂ ಆಕೆ ಕೇಳಲಿಲ್ಲ. ಇದಲ್ಲದೆ ಎಸ್ತೇರಳು ತನ್ನನ್ನು ನೋಡುವ ಎಲ್ಲರಿಂದಲೂ ದಯೆಹೊಂದಿದ್ದಳು. \v 16 ಎಸ್ತೇರಳು ಅರಸನಾದ ಅಹಷ್ವೇರೋಷನ ಆಳಿಕೆಯ ಏಳನೆಯ ವರ್ಷದ ಹತ್ತನೆಯ ತಿಂಗಳಾದ ತೇಬೆತ್ ಎಂಬ ಪುಷ್ಯ ಮಾಸದಲ್ಲಿ ಅರಸನ ಬಳಿಗೆ ಕರೆತರಲಾಯಿತು. \p \v 17 ಅರಸನು ಸಕಲ ಕನ್ಯೆಯರಿಗಿಂತ ಹೆಚ್ಚಾಗಿ ಎಸ್ತೇರಳನ್ನು ಮೆಚ್ಚಿಕೊಂಡನು. ಅವಳಿಗೆ ಅವನ ಸಮ್ಮುಖದಲ್ಲಿ ಸಮಸ್ತ ಕನ್ಯೆಯರಿಗಿಂತ ಹೆಚ್ಚು ದಯೆಯೂ ಮೆಚ್ಚುಗೆಯೂ ದೊರಕಿತು. ಆದ್ದರಿಂದ ಅವನು ರಾಜಕಿರೀಟವನ್ನು ಅವಳ ತಲೆಯ ಮೇಲೆ ಇರಿಸಿ ಎಸ್ತೇರಳನ್ನು ವಷ್ಟಿಗೆ ಬದಲಾಗಿ ರಾಣಿಯನ್ನಾಗಿ ಆರಿಸಿಕೊಂಡನು. \v 18 ಆಗ ಅರಸನು ತನ್ನ ಸಮಸ್ತ ಪ್ರಧಾನರಿಗೂ ಸೇವಕರಿಗೂ ಎಸ್ತೇರಳ ಗೌರವಾರ್ಥವಾಗಿ ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು. ಎಲ್ಲಾ ಪ್ರಾಂತಗಳಿಗೂ ರಜೆಯನ್ನು ಕೊಟ್ಟು ಅರಸನ ಸ್ಥಿತಿಗೆ ತಕ್ಕಂಥ ಬಹುಮಾನಗಳನ್ನು ಕೊಟ್ಟನು. \s1 ಮೊರ್ದೆಕೈಯು ರಾಜಕಂಟಕರ ಒಳಸಂಚನ್ನು ಬಯಲುಪಡಿಸಿದ್ದು \p \v 19 ಕನ್ಯೆಯರನ್ನು ಎರಡನೆಯ ಸಾರಿ ಕೂಡಿಸುವಾಗ, ಮೊರ್ದೆಕೈಯು ಅರಮನೆಯ ಹೆಬ್ಬಾಗಿಲಲ್ಲಿ ಕುಳಿತುಕೊಂಡಿದ್ದನು. \v 20 ಎಸ್ತೇರಳು ಮೊರ್ದೆಕೈಯು ತನಗೆ ಆಜ್ಞಾಪಿಸಿದ ಹಾಗೆ ತಾನು ಇಂಥ ದೇಶದವಳು ಮತ್ತು ಇಂಥ ಕುಟುಂಬದ ಹಿನ್ನೆಲೆಯವಳು ಎಂಬುದನ್ನು ಯಾರಿಗೂ ತಿಳಿಸಿರಲಿಲ್ಲ. ಏಕೆಂದರೆ ಎಸ್ತೇರಳು ಮೊರ್ದೆಕೈಯ ಆರೈಕೆಯಲ್ಲಿ ಇದ್ದಾಗ ಆಕೆ ಅವನ ಆಜ್ಞೆಯನ್ನು ಕೈಕೊಂಡು ನಡೆದಂತೆಯೇ ಈಗಲೂ ಅವನ ಆಜ್ಞೆಯನ್ನು ಪಾಲಿಸುತ್ತಿದ್ದಳು. \p \v 21 ಆ ದಿವಸಗಳಲ್ಲಿ ಮೊರ್ದೆಕೈಯು ಅರಮನೆಯ ಬಾಗಿಲಲ್ಲಿ ಕುಳಿತಿರುವಾಗ, ದ್ವಾರಪಾಲಕರಾದಂಥ ಅರಸನ ರಾಜಕಂಚುಕಿಗಳಾದ ಬಿಗೆತಾನ್ ಮತ್ತು ತೆರೆಷ್ ಎಂಬಿಬ್ಬರು ಅರಸನಾದ ಅಹಷ್ವೇರೋಷನ ಮೇಲೆ ಕೋಪಗೊಂಡು ಅವನನ್ನು ಕೊಲ್ಲಬೇಕೆಂದು ಒಳಸಂಚು ಮಾಡಿದರು. \v 22 ಈ ಕಾರ್ಯವು ಮೊರ್ದೆಕೈಗೆ ತಿಳಿದದ್ದರಿಂದ ಅವನು ಅದನ್ನು ರಾಣಿಯಾದ ಎಸ್ತೇರಳಿಗೆ ತಿಳಿಸಿದನು. ಎಸ್ತೇರಳು ಮೊರ್ದೆಕೈಯ ಹೆಸರನ್ನು ಅರಸನಿಗೆ ಹೇಳಿ ಆ ಒಳಸಂಚಿನ ಬಗ್ಗೆ ತಿಳಿಸಿದಳು. \v 23 ಈ ವಿಷಯ ವಿಚಾರಣೆಗೆ ಬಂದಾಗ ನಿಜವೆಂದು ಗೊತ್ತಾಯಿತು. ಆಗ ಆ ಇಬ್ಬರು ಅಧಿಕಾರಿಗಳನ್ನೂ ಗಲ್ಲಿಗೇರಿಸಲಾಯಿತು. ಇವೆಲ್ಲವನ್ನೂ ಅರಸನ ಮುಂದೆ ಇರುವ ರಾಜನ ಇತಿಹಾಸಗಳ ಪುಸ್ತಕದಲ್ಲಿ ಬರೆದಿಡಲಾಯಿತು. \c 3 \s1 ಯೆಹೂದ್ಯರನ್ನು ನಾಶಮಾಡಲು ಹಾಮಾನನ ಸಂಚು \p \v 1 ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನು ಅಗಾಗನ ವಂಶದವನೂ ಹಮ್ಮೆದಾತನ ಮಗ ಹಾಮಾನನನ್ನು ಹಿರಿಯ ಅಧಿಕಾರಿಯನ್ನಾಗಿ ಮಾಡಿ ಅವನನ್ನು ತನ್ನ ಬಳಿಯಲ್ಲಿರುವ ಸಮಸ್ತ ಶ್ರೇಷ್ಠರಿಗಿಂತ ಉನ್ನತಸ್ಥಾನವನ್ನು ಕೊಟ್ಟು ಗೌರವಿಸಿದನು. \v 2 ಆದಕಾರಣ ಅರಮನೆಯ ಬಾಗಿಲಲ್ಲಿರುವ ಅರಸನ ಸಮಸ್ತ ಸೇವಕರು ಬಗ್ಗಿ ಹಾಮಾನನಿಗೆ ಅಡ್ಡಬೀಳುತ್ತಿದ್ದರು. ಏಕೆಂದರೆ ಅರಸನು ಅವನನ್ನು ಕುರಿತು ಹಾಗೆಯೇ ಆಜ್ಞಾಪಿಸಿದ್ದನು. ಆದರೆ ಮೊರ್ದೆಕೈಯು ಬಗ್ಗದೆ ಅಡ್ಡಬೀಳದೆಯೂ ಇದ್ದನು. \p \v 3 ಆಗ ಅರಮನೆಯ ಬಾಗಿಲಲ್ಲಿರುವ ಅರಸನ ಸೇವಕರು ಮೊರ್ದೆಕೈಗೆ, “ನೀನು ಅರಸನ ಆಜ್ಞೆಯನ್ನು ಮೀರುವುದೇನು?” ಎಂದರು. \v 4 ಅವರು ಪ್ರತಿದಿನ ಅವನಿಗೆ ಹೇಳಿದರೂ ಅವನು ಅವರ ಮಾತಿಗೆ ಕಿವಿಗೊಡಲಿಲ್ಲ. ತಾನು ಯೆಹೂದ್ಯನೆಂದು ಅವರಿಗೆ ಹೇಳಿಕೊಳ್ಳುತ್ತಿದ್ದ ಮೊರ್ದೆಕೈಯ ನಡವಳಿಕೆಯನ್ನು ಸಹಿಸಬಹುದೋ ಎಂದು ಕಾಣಲು ಅವರು ಹಾಮಾನನಿಗೆ ದೂರು ಹೇಳಿದರು. \p \v 5 ಹಾಮಾನನು, ಮೊರ್ದೆಕೈಯು ತನಗೆ ಬಗ್ಗಿ ಅಡ್ಡಬೀಳದೆ ಇರುವುದನ್ನು ಕಂಡಾಗ ಬಹು ಕೋಪಗೊಂಡನು. \v 6 ಮೊರ್ದೆಕೈ ಮತ್ತು ಅವನ ಜನರು ಯೆಹೂದ್ಯರೆಂದು ಹಾಮಾನನಿಗೆ ಗೊತ್ತಾದಾಗ ಮೊರ್ದೆಕೈಯನ್ನು ಮಾತ್ರ ಕೊಲ್ಲಬಾರದೆಂದು ಅವನಿಗೆ ತೋರಿತು. ಅದರ ಬದಲು ಹಾಮಾನನು ಅಹಷ್ವೇರೋಷನ ಸಮಸ್ತ ರಾಜ್ಯದಲ್ಲಿರುವ ಮೊರ್ದೆಕೈಯ ಜನರಾದ ಯೆಹೂದ್ಯರನ್ನೆಲ್ಲಾ ಸಂಹರಿಸಲು ಮಾರ್ಗವನ್ನು ಹುಡುಕಿದನು. \p \v 7 ಅರಸನಾದ ಅಹಷ್ವೇರೋಷನ ಆಳ್ವಿಕೆಯ ಹನ್ನೆರಡನೆ ವರ್ಷದ ಮೊದಲನೆಯ ತಿಂಗಳು ಆದ ನಿಸಾನ ಮಾಸದಲ್ಲಿ ಹಾಮಾನನ ಮುಂದೆ ಶುಭಮಾಸವೂ ಶುಭದಿನವೂ ಯಾವುದು ಎಂದು ತಿಳಿದುಕೊಳ್ಳಲು \tl ಪೂರ್\tl* ಅನ್ನು ಅಂದರೆ ಚೀಟನ್ನು ಹಾಕಿದರು. ಚೀಟು ಹನ್ನೆರಡನೆ ತಿಂಗಳಾದ ಆದಾರ್ ಮಾಸದ ಹದಿಮೂರನೆಯ ದಿನಕ್ಕೆ ಬಿತ್ತು. \p \v 8 ಆಗ ಹಾಮಾನನು ಅರಸನಾದ ಅಹಷ್ವೇರೋಷನಿಗೆ, “ನಿನ್ನ ರಾಜ್ಯದ ಸಕಲ ಪ್ರಾಂತಗಳಲ್ಲಿರುವ ಜನರೊಳಗೆ ಚದರಿ ಬಂದು ವಾಸಿಸುವ ಪ್ರತ್ಯೇಕವಾದ ಜನಾಂಗದ ಜನರಿದ್ದಾರೆ. ಅವರ ರೀತಿನೀತಿಗಳು ಎಲ್ಲಾ ಜನರಿಗಿಂತಲೂ ಬೇರೆಯಾಗಿರುತ್ತವೆ. ಈ ಜನರು ಅರಸನ ನಿಯಮಗಳನ್ನು ಕೈಗೊಳ್ಳುವುದೇ ಇಲ್ಲ. ಆದಕಾರಣ ಇಂಥವರನ್ನು ಸುಮ್ಮನೇ ಬಿಡುವುದು ಅರಸನ ಪ್ರಯೋಜನಕ್ಕೆ ತಕ್ಕದ್ದಲ್ಲ. \v 9 ಅರಸನಿಗೆ ಸಮ್ಮತಿಯಾದರೆ, ಅವರೆಲ್ಲರಿಗೂ ಮರಣದಂಡನೆ ವಿಧಿಸುವಂತೆ ಒಂದು ಆಜ್ಞೆಯನ್ನು ಹೊರಡಿಸಬೇಕು. ಆಗ ನಾನು ರಾಜಭಂಡಾರಕ್ಕೆ 340 ಮೆಟ್ರಿಕ್ ಟನ್ ಬೆಳ್ಳಿಯನ್ನು ಖಜಾಂಚಿಗೆ ಕೊಡುವೆನು,” ಎಂದನು. \p \v 10 ಆಗ ಅರಸನು ತನ್ನ ಕೈಯಲ್ಲಿದ್ದ ಮುದ್ರೆಉಂಗುರವನ್ನು ತೆಗೆದು ಯೆಹೂದ್ಯರ ವೈರಿಯಾದ ಅಗಾಗನ ವಂಶಸ್ಥನೂ ಹಮ್ಮೆದಾತನ ಮಗನೂ ಆದ ಹಾಮಾನನಿಗೆ ಕೊಟ್ಟನು. \v 11 ಅರಸನು ಹಾಮಾನನಿಗೆ, “ಬೆಳ್ಳಿಯನ್ನು ನೀನೇ ಇಟ್ಟುಕೋ: ನಿನಗೆ ಸರಿ ತೋರುವ ಹಾಗೆ ಆ ಜನರಿಗೆ ಮಾಡು,” ಎಂದನು. \p \v 12 ಮೊದಲನೆಯ ತಿಂಗಳ ಹದಿಮೂರನೆಯ ದಿವಸದಲ್ಲಿ ಅರಸನ ಲೇಖಕರನ್ನು ಕರೆಸಲಾಯಿತು. ಹಾಮಾನನು ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಪ್ರತಿ ಪ್ರಾಂತದ ಮೇಲಿರುವ ಅರಸನ ಕೈ ಕೆಳಗಿನ ಉಪ ರಾಜರುಗಳಿಗೂ ಅಧಿಪತಿಗಳಿಗೂ ಪ್ರತಿ ಪ್ರಾಂತದಲ್ಲಿ ಜನರ ಮೇಲಿರುವ ಅಧಿಕಾರಿಗೂ ಅವರವರ ಸ್ವದೇಶಿ ಲಿಪಿಗಳಲ್ಲಿಯೂ, ಭಾಷೆಗಳಲ್ಲಿಯೂ ಪತ್ರಗಳನ್ನು ಬರೆದರು. ಅರಸನಾದ ಅಹಷ್ವೇರೋಷನ ಹೆಸರಿನಲ್ಲಿಯೇ ಲಿಖಿತವಾದ ಈ ಪತ್ರಗಳು ಅರಸನ ಉಂಗುರದಿಂದ ಅಧಿಕೃತ ರಾಜಮುದ್ರೆಯನ್ನು ಹೊಂದಿದ್ದವು. \v 13 ಹನ್ನೆರಡನೆಯ ತಿಂಗಳಾದ ಆದಾರ್ ಮಾಸದ ಹದಿಮೂರನೆಯ ದಿನದಲ್ಲಿ, ಹಿರಿಯರೂ, ಕಿರಿಯರೂ, ಮಕ್ಕಳೂ, ಮಹಿಳೆಯರೂ, ಒಟ್ಟು ಎಲ್ಲಾ ಯೆಹೂದ್ಯರನ್ನು ಒಂದೇ ದಿನದಲ್ಲಿ ಕೊಂದುಹಾಕುವುದಕ್ಕೂ ನಾಶಮಾಡುವುದಕ್ಕೂ ಅವರ ಆಸ್ತಿಯನ್ನು ಕೊಳ್ಳೆ ಹೊಡೆಯುವದಕ್ಕೂ ಅರಸನ ಎಲ್ಲಾ ಪ್ರಾಂತಗಳಿಗೆ ಅಂಚೆಯವರ ಮೂಲಕ ಪತ್ರಗಳನ್ನು ಕಳುಹಿಸಲಾಯಿತು. \v 14 ಎಲ್ಲರೂ ಆ ದಿನದಲ್ಲಿ ಸಿದ್ಧರಾಗಿರುವ ಹಾಗೆ ಪ್ರತಿ ಪ್ರಾಂತದಲ್ಲಿಯೂ ರಾಜಾಜ್ಞೆ ಜಾರಿಗೆ ತರುವುದರಲ್ಲಿ ಇತ್ತು. ರಾಜಾಜ್ಞೆಯಾಗಿ ಬರೆದ ಪತ್ರದ ಪ್ರತಿಯಲ್ಲಿ ಎಲ್ಲಾ ಜನರಲ್ಲಿಯೂ ಜಾರಿಗೆ ತರಲು ಪ್ರಕಟಿಸಬೇಕೆಂದು ಸಹ ಬರೆದಿತ್ತು. \p \v 15 ಅಂಚೆಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನಿನ ಅರಮನೆಯಲ್ಲಿಂದ ಆ ಆಜ್ಞೆಯು ಹೊರಡಿತು. ಅರಸನೂ ಹಾಮಾನನೂ ಮದ್ಯಪಾನ ಮಾಡಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವೋ ತಳಮಳಗೊಂಡಿತ್ತು. \c 4 \s1 ಸಹಾಯಮಾಡಲು ಎಸ್ತೇರಳನ್ನು ಮೊರ್ದೆಕೈ ಪ್ರೋತ್ಸಾಹಿಸಿದ್ದು \p \v 1 ಆದದ್ದೆಲ್ಲಾ ಮೊರ್ದೆಕೈಗೆ ತಿಳಿದಾಗ ಮೊರ್ದೆಕೈ ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯನ್ನು ಹಚ್ಚಿಕೊಂಡು ಪಟ್ಟಣದ ಮಧ್ಯದಲ್ಲಿ ಹೋಗಿ ಬಹು ದುಃಖದಿಂದ ಗೋಳಾಡಿದನು. \v 2 ಅವನು ಅರಸನ ಅರಮನೆಯ ಬಾಗಿಲಿನವರೆಗೆ ಬಂದನು. ಏಕೆಂದರೆ ಗೋಣಿತಟ್ಟನ್ನು ಉಟ್ಟುಕೊಂಡು ಅರಸನ ಅರಮನೆಯ ಬಾಗಿಲಲ್ಲಿ ಪ್ರವೇಶಿಸಲು ಒಬ್ಬನಿಗೂ ಅಪ್ಪಣೆ ಇರಲಿಲ್ಲ. \v 3 ಇದಲ್ಲದೆ ಅರಸನ ಮಾತೂ ಅವನ ಕಟ್ಟಳೆಯೂ ಯಾವ ಯಾವ ಸೀಮೆಯಲ್ಲಿ ಯಾವ ಯಾವ ಸ್ಥಳಕ್ಕೆ ಹೋಯಿತೋ ಅಲ್ಲಿ ಯೆಹೂದ್ಯರೊಳಗೆ ಮಹಾ ದುಃಖವೂ ಉಪವಾಸವೂ ಅಳುವಿಕೆಯೂ ಗೋಳಾಡುವಿಕೆಯೂ ಉಂಟಾಗಿತ್ತು. ಅನೇಕರು ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡರು. \p \v 4 ಆಗ ಎಸ್ತೇರಳ ದಾಸಿಯರೂ ಅವಳ ಕಂಚುಕಿಯರೂ ಬಂದು ಮೊರ್ದೆಕೈ ಬಗ್ಗೆ ಅವಳಿಗೆ ತಿಳಿಸಿದರು. ಆದ್ದರಿಂದ ರಾಣಿಯು ಬಹು ವ್ಯಥೆಪಟ್ಟಳು. ಇದಲ್ಲದೆ ಮೊರ್ದೆಕೈಯು ಗೋಣಿತಟ್ಟನ್ನು ತೆಗೆದುಹಾಕಿ, ವಸ್ತ್ರಗಳನ್ನು ಧರಿಸಿಕೊಳ್ಳುವಂತೆ ಉಡುಪನ್ನು ಕಳುಹಿಸಿಕೊಟ್ಟಳು. ಆದರೆ ಅವನು ಅದನ್ನು ತೆಗೆದುಕೊಳ್ಳಲಿಲ್ಲ. \v 5 ಆಗ ಎಸ್ತೇರಳು ತನ್ನ ಬಳಿಯಲ್ಲಿ ಸೇವೆಗಾಗಿ ನೇಮಿಸಲಾಗಿದ್ದ ಅರಸನ ರಾಜಕಂಚುಕಿಯರಲ್ಲಿ ಹತಾಕನನ್ನು ಕರೆದು, ನಡೆದ ಸಂಗತಿ ಏನೆಂದೂ, ಮೊರ್ದೆಕೈಯ ವರ್ತನೆಗೆ ಕಾರಣವನ್ನೂ ಅವನಿಂದ ತಿಳಿದುಕೊಂಡು ಬರಬೇಕೆಂದು ಆಜ್ಞಾಪಿಸಿದಳು. \p \v 6 ಹಾಗೆಯೇ ಹತಾಕನು ಅರಸನ ಅರಮನೆಯ ಬಾಗಿಲ ಮುಂದೆ ಪಟ್ಟಣದ ಬೀದಿಯಲ್ಲಿದ್ದ ಮೊರ್ದೆಕೈಯ ಬಳಿಗೆ ಹೋದನು. \v 7 ಆಗ ಮೊರ್ದೆಕೈ ತನಗೆ ಆದ ಎಲ್ಲವನ್ನೂ, ಹಾಮಾನನು ಯೆಹೂದ್ಯರನ್ನು ನಾಶಮಾಡಲು ರಾಜಭಂಡಾರಕ್ಕೆ ಕೊಡಲು ವಾಗ್ದಾನಮಾಡಿಕೊಂಡ ಹಣದ ವಿಷಯವನ್ನೂ ಅವನಿಗೆ ತಿಳಿಸಿದನು. \v 8 ಯೆಹೂದ್ಯರನ್ನು ನಾಶಮಾಡಲು ಶೂಷನಿನಲ್ಲಿ ಪ್ರಕಟಗೊಂಡ ರಾಜಾಜ್ಞೆಯ ಪತ್ರದ ಪ್ರತಿಯನ್ನು ಅವನ ಕೈಯಲ್ಲಿ ಕೊಟ್ಟು ಅದನ್ನು ಎಸ್ತೇರಳಿಗೆ ತೋರಿಸಿ ವಿವರಿಸುವಂತೆಯೂ, ಅವಳು ತನ್ನ ಜನರಿಗಾಗಿ ಅರಸನ ಮುಂದೆ ಹೋಗಿ ಬಿನ್ನಹ ಮಾಡುವಂತೆಯೂ ಆಕೆಗೆ ತಿಳಿಸಲು ಹೇಳಿದನು. \p \v 9 ಆಗ ಹತಾಕನು ಹಿಂದಿರುಗಿ ಬಂದು ಎಸ್ತೇರಳಿಗೆ ಮೊರ್ದೆಕೈಯ ಮಾತುಗಳನ್ನು ತಿಳಿಸಿದನು. \v 10 ಎಸ್ತೇರಳು ಮತ್ತೊಮ್ಮೆ ಹತಾಕನನ್ನು ಮೊರ್ದೆಕೈಯ ಬಳಿಗೆ ಕಳುಹಿಸಿ, \v 11 “ಅರಸನು ಹೇಳಿಕಳುಹಿಸದೆ ಅರಸನ ಬಳಿಗೆ ಅರಮನೆಯ ಒಳಾಂಗಣಕ್ಕೆ ಹೋಗುವ ಗಂಡಸರಿಗಾಗಲಿ, ಹೆಂಗಸರಿಗಾಗಲಿ ಮರಣದಂಡನೆಯಾಗುವುದು. ಒಂದು ವೇಳೆ ಒಳಗೆ ಬಂದ ವ್ಯಕ್ತಿಯ ಕಡೆಗೆ ಅರಸನು ತನ್ನ ಸ್ವರ್ಣದಂಡವನ್ನು ಚಾಚಿದರೆ ಅವನಿಗೆ ಮಾತ್ರ ಮರಣದಂಡನೆಯಾಗದೆ ಜೀವದಿಂದ ಉಳಿಯುವರು. ಈ ರಾಜಾಜ್ಞೆಯನ್ನು ಅರಸನ ಸಮಸ್ತ ಸೇವಕರೂ ಅರಸನ ಪ್ರಾಂತಗಳ ಜನರೂ ತಿಳಿದಿದ್ದಾರೆ. ಆದರೆ ಕಳೆದ ಮೂವತ್ತು ದಿನಗಳಿಂದ ಅರಸನ ಬಳಿಗೆ ಹೋಗುವುದಕ್ಕೆ ನನಗೆ ಆಮಂತ್ರಣವೇ ಬರಲಿಲ್ಲ,” ಎಂದು ತಿಳಿಸುವಂತೆ ಹೇಳಿದಳು. \p \v 12 ಹತಾಕನು ಎಸ್ತೇರಳ ಮಾತುಗಳನ್ನು ಮೊರ್ದೆಕೈಗೆ ತಿಳಿಸಿದನು. \v 13 ಆಗ ಮೊರ್ದೆಕೈಯು ಎಸ್ತೇರಳಿಗೆ, “ಯೆಹೂದ್ಯರೆಲ್ಲಾ ನಾಶವಾದರೂ ನೀನೊಬ್ಬಳು ಮಾತ್ರ ಅರಮನೆಯಲ್ಲಿರುವುದರಿಂದ ತಪ್ಪಿಸಿಕೊಳ್ಳುವೆಯೆಂದು ಭಾವಿಸಬೇಡ. \v 14 ಏಕೆಂದರೆ ನೀನು ಈಗ ಮೌನವಾಗಿದ್ದು ಬಿಟ್ಟರೆ ಮತ್ತೊಂದು ಕಡೆಯಿಂದ ಯೆಹೂದ್ಯರಿಗೆ ಸಹಾಯವೂ ಬಿಡುಗಡೆಯೂ ಉಂಟಾಗುವುವು. ಆದರೆ ನೀನೂ ನಿನ್ನ ತಂದೆಯ ಮನೆಯವರೂ ನಾಶವಾಗಿಹೋಗುವಿರಿ. ಇಂಥಾ ಕಾಲಕ್ಕೋಸ್ಕರ ನೀನು ಪಟ್ಟಕ್ಕೆ ಬಂದಿರಬಹುದು, ಯಾರಿಗೆ ಗೊತ್ತು?” ಎಂದು ಹೇಳಿ ಕಳುಹಿಸಿದನು. \p \v 15 ಆಗ ಎಸ್ತೇರಳು ಮತ್ತೆ ಮೊರ್ದೆಕೈಗೆ, \v 16 “ನೀನು ಹೋಗಿ ಶೂಷನಿನಲ್ಲಿರುವ ಎಲ್ಲಾ ಯೆಹೂದ್ಯರನ್ನು ಕೂಡಿಸು; ನೀವು ರಾತ್ರಿ ಹಗಲೂ ಮೂರು ದಿನ ಅನ್ನಪಾನಗಳನ್ನು ಬಿಟ್ಟು ನನಗೋಸ್ಕರ ಉಪವಾಸಮಾಡಿರಿ. ಹಾಗೆಯೇ ನಾನೂ ನನ್ನ ದಾಸಿಯರೊಡನೆ ಉಪವಾಸ ಮಾಡುವೆನು. ಅನಂತರ ನಾನು ರಾಜಾಜ್ಞೆಯನ್ನು ಮೀರಿ ಅರಸನ ಬಳಿಗೆ ಹೋಗುವೆನು. ನಾನು ಸತ್ತರೂ ಸಾಯುವೆನು,” ಎಂದು ಹೇಳಿಕಳುಸಿದಳು. \p \v 17 ಆಗ ಮೊರ್ದೆಕೈ ಹೊರಟುಹೋಗಿ ಎಸ್ತೇರಳು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದನು. \c 5 \s1 ಎಸ್ತೇರಳು ಅರಸನನ್ನು ಬೇಡಿಕೊಂಡದ್ದು \p \v 1 ಮೂರನೆಯ ದಿವಸದಲ್ಲಿ, ಎಸ್ತೇರಳು ರಾಜವಸ್ತ್ರ ಆಭರಣಗಳನ್ನು ಧರಿಸಿಕೊಂಡು ಅರಮನೆಗೆ ಎದುರಾಗಿರುವ ಅರಸನ ಒಳಗಣ ಪ್ರಾಕಾರವನ್ನು ಪ್ರವೇಶಿಸಿ ನಿಂತಳು. ಅರಸನು ರಾಜಮಂದಿರದೊಳಗೆ ತನ್ನ ರಾಜಸಿಂಹಾಸನದ ಮೇಲೆ ಬಾಗಿಲಿಗೆ ಎದುರಾಗಿ ಕುಳಿತಿದ್ದನು. \v 2 ಅರಸನು ಪ್ರಾಕಾರದಲ್ಲಿ ನಿಂತಿರುವ ಎಸ್ತೇರ್ ರಾಣಿಯನ್ನು ಕಂಡ ಕೂಡಲೆ, ಆಕೆಗೆ ತನ್ನ ಮೆಚ್ಚುಗೆಯನ್ನು ತೋರಿ ತನ್ನ ಕೈಯಲ್ಲಿದ್ದ ಸ್ವರ್ಣದಂಡವನ್ನು ಎಸ್ತೇರಳ ಕಡೆಗೆ ಚಾಚಿದನು. ಎಸ್ತೇರಳು ಸಮೀಪಕ್ಕೆ ಬಂದು ರಾಜದಂಡದ ತುದಿಯನ್ನು ಮುಟ್ಟಿದಳು. \p \v 3 ಆಗ ಅರಸನು ಅವಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಏನು? ನಿನ್ನ ಬೇಡಿಕೆ ಏನು? ಅದು ನನ್ನ ರಾಜ್ಯದ ಅರ್ಧವಾಗಿದ್ದರೂ ಸರಿ, ನಾನು ಅದನ್ನು ನಿನಗೆ ಕೊಡುವೆನು,” ಎಂದನು. \p \v 4 ಅದಕ್ಕೆ ಎಸ್ತೇರಳು ಅರಸನಿಗೆ, “ಸಮ್ಮತಿಯಾದರೆ ನಾನು ಅರಸನಿಗಾಗಿ ಸಿದ್ಧಮಾಡಿಸಿರುವ ಔತಣಕ್ಕೆ ಅರಸನೂ ಹಾಮಾನನೂ ಈ ಹೊತ್ತು ಬರಬೇಕು,” ಎಂದಳು. \p \v 5 ಆಗ ಅರಸನು, “ಎಸ್ತೇರಳು ಹೇಳಿದ ಪ್ರಕಾರ ನಾವು ಮಾಡಲು, ಬೇಗನೆ ಹಾಮಾನನನ್ನು ಕರೆದುಕೊಂಡು ಬನ್ನಿರಿ,” ಎಂದು ಆಜ್ಞಾಪಿಸಿದನು. \p ಎಸ್ತೇರಳು ಏರ್ಪಡಿಸಿದ್ದ ಔತಣಕ್ಕೆ ಅರಸನೂ ಹಾಮಾನನೂ ಬಂದರು. \v 6 ದ್ರಾಕ್ಷಾರಸವನ್ನು ಪಾನಮಾಡುತ್ತಿರುವಾಗ ಅರಸನು ಮತ್ತೊಮ್ಮೆ ಎಸ್ತೇರಳಿಗೆ, “ಈಗ ನಿನ್ನ ವಿಜ್ಞಾಪನೆ ಏನು? ನಿನ್ನ ಬೇಡಿಕೆ ಏನು? ಅದು ನನ್ನ ರಾಜ್ಯದ ಅರ್ಧವಾಗಿದ್ದರೂ ಸರಿ, ನಾನು ಅದನ್ನು ನಿನಗೆ ಕೊಡುವೆನು,” ಎಂದನು. \p \v 7 ಅದಕ್ಕೆ ಎಸ್ತೇರಳು, “ನನ್ನ ಬೇಡಿಕೆಯೂ ನನ್ನ ವಿಜ್ಞಾಪನೆಯೂ ಇದೇ: \v 8 ಅರಸನಿಗೆ ಸಮ್ಮತಿಯಾದರೆ, ಅರಸನಿಗೂ ಹಾಮಾನನಿಗೂ ನಾನು ಮಾಡಲಿರುವ ಔತಣಕ್ಕೆ ನಾಳೆಯೂ ಬರಬೇಕು. ಆಗ ಅರಸನ ಪ್ರಶ್ನೆಗೆ ಉತ್ತರಕೊಡುವೆನು,” ಎಂದಳು. \s1 ಹಾಮಾನನು ಮೊರ್ದೆಕೈಯನ್ನು ಗಲ್ಲಿಗೆ ಹಾಕಬೇಕೆಂದು ನಿರ್ಣಯಿಸಿಕೊಂಡದ್ದು \p \v 9 ಆ ದಿನದಲ್ಲಿ ಹಾಮಾನನು ಹರ್ಷಭರಿತನಾಗಿ ಹೊರಟುಹೋದನು. ಆದರೆ ಅರಮನೆಯ ಹೆಬ್ಬಾಗಿಲಲ್ಲಿರುವ ಮೊರ್ದೆಕೈ ತನಗೆ ಭಯಪಡದೆ ಕುಳಿತುಕೊಂಡೇ ಇರುವುದನ್ನು ಹಾಮಾನನು ಕಂಡು ಮೊರ್ದೆಕೈಯ ಮೇಲೆ ಕೋಪಗೊಂಡನು. \v 10 ಆದರೂ ಹಾಮಾನನು ಬಿಗಿಹಿಡಿದುಕೊಂಡು ತನ್ನ ಮನೆಗೆ ಹೋದನು. \p ಅವನು ತನ್ನ ಸ್ನೇಹಿತರನ್ನೂ ತನ್ನ ಹೆಂಡತಿಯಾದ ಜೆರೆಷಳನ್ನೂ ಕರೆಯಿಸಿದನು. \v 11 ಹಾಮಾನನು ತನ್ನ ಐಶ್ವರ್ಯದ ಘನವನ್ನೂ, ತನ್ನ ಮಕ್ಕಳ ಹೆಚ್ಚಳವನ್ನೂ, ಅರಸನು ತನ್ನನ್ನು ಹೆಚ್ಚಿಸಿದ್ದನ್ನೂ, ಅರಸನ ಪ್ರಭುಗಳ ಹಾಗೂ ಸೇವಕರ ಮೇಲೆ ಎತ್ತಿದ್ದನ್ನೂ ಹೀಗೆ ಎಲ್ಲವನ್ನೂ ಅವರಿಗೆ ವಿವರವಾಗಿ ಹೇಳಿದನು. \v 12 ಇದಲ್ಲದೆ ಹಾಮಾನನು, “ಎಸ್ತೇರ್ ರಾಣಿಯು ತಾನು ಮಾಡಿಸಿದ ಔತಣಕ್ಕೆ ನನ್ನ ಹೊರತು ಅರಸನ ಸಂಗಡ ಬೇರೆ ಯಾರನ್ನು ಕರೆಯಲಿಲ್ಲ. ಮರುದಿನವೂ ಅರಸನೊಂದಿಗೆ ಔತಣಮಾಡಲು ನನ್ನನ್ನು ಆಹ್ವಾನಿಸಿದ್ದಾಳೆ. \v 13 ಆದರೆ ಯೆಹೂದ್ಯನಾದ ಮೊರ್ದೆಕೈಯು ಅರಮನೆಯ ಬಾಗಿಲಲ್ಲಿ ನನ್ನ ಕಣ್ಣೆದುರು ಕುಳಿತಿರುವವರೆಗೂ ಇದೆಲ್ಲದರಿಂದ ನನಗೆ ತೃಪ್ತಿಯಾಗುವುದಿಲ್ಲ” ಎಂದನು. \p \v 14 ಆಗ ಅವನ ಹೆಂಡತಿಯಾದ ಜೆರೆಷಳೂ ಅವನ ಸಮಸ್ತ ಸ್ನೇಹಿತರೂ ಅವನಿಗೆ, “ಅರಸನ ಅಪ್ಪಣೆಯನ್ನು ಪಡೆದು ಮೊರ್ದೆಕೈಯನ್ನು ಬೆಳಿಗ್ಗೆ ಗಲ್ಲಿಗೇರಿಸಲು ಇಪ್ಪತ್ತು ಮೀಟರ್ ಉದ್ದದ ಒಂದು ಗಲ್ಲುಮರವನ್ನು ಮಾಡು. ತರುವಾಯ ಅರಸನ ಸಂಗಡ ಔತಣಕ್ಕೆ ಹೋಗಿ ಸಂತೋಷವಾಗಿರು,” ಎಂದರು. ಈ ಸಲಹೆ ಹಾಮಾನನಿಗೆ ಮೆಚ್ಚಿಕೆಯಾದದ್ದರಿಂದ ಗಲ್ಲುಮರವನ್ನು ಸಿದ್ಧಮಾಡಿಸಿದನು. \c 6 \s1 ಮೊರ್ದೆಕೈಗೆ ಅರಸನಿಂದ ಗೌರವ \p \v 1 ಆ ರಾತ್ರಿ ಅರಸನಿಗೆ ನಿದ್ರೆ ಬರಲಿಲ್ಲ. ಆದ್ದರಿಂದ ಅರಸನು ಇತಿಹಾಸ ಘಟನೆಗಳನ್ನು ಬರೆದಿಟ್ಟಿದ್ದ ಗ್ರಂಥವನ್ನು ತೆಗೆದುಕೊಂಡು ಬರಲು ಹೇಳಿದನು. \v 2 ಅದನ್ನು ಅರಸನ ಮುಂದೆ ತಂದು ಓದಿಸಿದಾಗ, ದ್ವಾರಪಾಲಕರಾಗಿದ್ದ ರಾಜಕಂಚುಕಿಯರಲ್ಲಿ ಇಬ್ಬರಾದ ಬಿಗೆತಾನನೂ ತೆರೆಷನೂ ಅರಸನಾದ ಅಹಷ್ವೇರೋಷನನ್ನು ಕೊಲ್ಲಬೇಕೆಂದು ಒಳಸಂಚುಮಾಡಿದ ಘಟನೆಯು ಬರೆದಿತ್ತು. ಮೊರ್ದೆಕೈಯು ಹೇಗೆ ಅದನ್ನು ಅರಸನಿಗೆ ತಿಳಿಸಿದನೆಂದು ಸಹ ಅದರಲ್ಲಿ ಬರೆದಿತ್ತು. \p \v 3 ಆಗ ಅರಸನು, “ಈ ಸತ್ಕಾರ್ಯಕ್ಕಾಗಿ ಮೊರ್ದೆಕೈಯನಿಗೆ ಯಾವ ಸನ್ಮಾನ ಮಾಡಲಾಯಿತು?” ಎಂದು ವಿಚಾರಿಸಿದನು. \p ಅರಸನ ಸೇವಕರು, “ಮೊರ್ದೆಕೈಯನಿಗೆ ಏನೂ ಮಾಡಿಲ್ಲ,” ಎಂದು ಹೇಳಿದರು. \p \v 4 ಆಗ ಅರಸನು, “ಯಾರು ಅಂಗಳದಲ್ಲಿ?” ಎಂದನು. ಅಷ್ಟರಲ್ಲಿ ಹಾಮಾನನು ತಾನು ಸಿದ್ಧಮಾಡಿಸಿದ ಗಲ್ಲುಮರಕ್ಕೆ ಮೊರ್ದೆಕೈಯನ್ನು ನೇಣುಹಾಕಿಸಲು ಅರಸನ ಸಂಗಡ ಮಾತನಾಡಲು ಅರಮನೆಯ ಹೊರಗಿನ ಅಂಗಳಕ್ಕೆ ಬಂದಿದ್ದನು. \p \v 5 ಆದ್ದರಿಂದ ಅರಸನ ಸೇವಕರು, “ಇಗೋ, ಹಾಮಾನನು ಅಂಗಳದಲ್ಲಿ ನಿಂತಿದ್ದಾನೆ,” ಎಂದರು. \p ಅದಕ್ಕೆ ಅರಸನು, “ಅವನು ಒಳಗೆ ಬರಲಿ,” ಎಂದನು. \p \v 6 ಹಾಮಾನನು ಒಳಕ್ಕೆ ಬಂದಾಗ ಅರಸನು ಅವನಿಗೆ, “ಅರಸನು ಒಬ್ಬ ವ್ಯಕ್ತಿಯನ್ನು ಸನ್ಮಾನಿಸಲು ಬಯಸಿದರೆ ಮನುಷ್ಯನಿಗೆ ಅಂಥ ವ್ಯಕ್ತಿಗೆ ಮಾಡಬೇಕಾದದ್ದೇನು?” ಎಂದು ವಿಚಾರಿಸಿದನು. \p ಆಗ ಹಾಮಾನನು ತನ್ನನ್ನು ಅಲ್ಲದೆ ಅರಸನು ಬೇರೆ ಯಾರನ್ನು ಸನ್ಮಾನಿಸಬೇಕೆಂದಿರುವನು ಎಂದುಕೊಂಡನು. \v 7 ಆದ್ದರಿಂದ ಹಾಮಾನನು ಅರಸನಿಗೆ, “ಅರಸನು ಸನ್ಮಾನಿಸಬೇಕೆಂದಿರುವ ಮನುಷ್ಯನಿಗೆ ಮಾಡಬೇಕಾದದ್ದೇನೆಂದರೆ, \v 8 ಅರಸನು ಧರಿಸಿಕೊಳ್ಳುವ ರಾಜವಸ್ತ್ರಗಳನ್ನೂ, ಅರಸನು ಸವಾರಿ ಮಾಡುವ ಕುದುರೆಯನ್ನೂ, ಅರಸನ ತಲೆಯ ಮೇಲೆ ಧರಿಸಿಕೊಳ್ಳುವ ರಾಜಕಿರೀಟವನ್ನೂ ತರಿಸಬೇಕು. \v 9 ಆ ವಸ್ತ್ರಗಳನ್ನೂ ಕುದುರೆಯನ್ನೂ ಅರಸನ ಪ್ರಧಾನರಲ್ಲಿ ಒಬ್ಬನ ವಶಕ್ಕೆ ಕೊಡಬೇಕು. ಇವನು ಅರಸನು ಸನ್ಮಾನಿಸಬೇಕೆಂದಿರುವ ವ್ಯಕ್ತಿಗೆ ರಾಜವಸ್ತ್ರಗಳನ್ನು ತೊಡಿಸಿದ ತರುವಾಯ, ಅವನನ್ನು ಕುದುರೆಯ ಮೇಲೆ ಕೂರಿಸಿ ಪಟ್ಟಣ ಬೀದಿಗಳಲ್ಲಿ ಮೆರವಣಿಗೆ ಮಾಡಿಸುತ್ತಾ, ಅವನ ಮುಂದೆ, ‘ಅರಸನು ಸನ್ಮಾನಿಸಬೇಕೆಂದಿರುವ ಮನುಷ್ಯನಿಗೆ ಗೌರವಿಸುವ ರೀತಿ ಇದೇ!’ ಎಂದು ಪ್ರಕಟಿಸಬೇಕು,” ಎಂದನು. \p \v 10 ಆಗ ಅರಸನು ಹಾಮಾನನಿಗೆ, “ನೀನು ಹೇಳಿದ ಪ್ರಕಾರವೇ ಬೇಗನೆ ಹೋಗಿ ರಾಜವಸ್ತ್ರಗಳನ್ನೂ ಪಟ್ಟದ ಕುದುರೆಯನ್ನೂ ತೆಗೆದುಕೊಂಡು ಅರಮನೆಯ ಹೆಬ್ಬಾಗಿಲಲ್ಲಿ ಕುಳಿತಿರುವ ಯೆಹೂದ್ಯನಾದ ಮೊರ್ದೆಕೈಗೆ ಹಾಗೆಯೇ ಮಾಡು. ನೀನು ಸಲಹೆಮಾಡಿದ್ದರಲ್ಲಿ ಒಂದನ್ನೂ ಬಿಡದೆ, ಎಲ್ಲವನ್ನೂ ಮಾಡು,” ಎಂದು ಹಾಮಾನನಿಗೆ ಆಜ್ಞಾಪಿಸಿದನು. \p \v 11 ಆದ್ದರಿಂದ ಹಾಮಾನನು ರಾಜವಸ್ತ್ರಗಳನ್ನೂ ಪಟ್ಟದ ಕುದುರೆಯನ್ನೂ ತೆಗೆದುಕೊಂಡು ಮೊರ್ದೆಕೈಗೆ ಆ ವಸ್ತ್ರಗಳನ್ನು ತೊಡಿಸಿ, ಅವನನ್ನು ಕುದುರೆಯ ಮೇಲೆ ಕೂರಿಸಿ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿ ಅವನ ಮುಂದೆ, “ಅರಸನು ಸನ್ಮಾನಿಸಬೇಕೆಂದಿರುವ ಮನುಷ್ಯನಿಗೆ ಗೌರವಿಸುವ ರೀತಿ ಇದೇ!” ಎಂದು ಸಾರಿದನು. \p \v 12 ಅನಂತರ ಮೊರ್ದೆಕೈ ಪುನಃ ಅರಮನೆಯ ಬಾಗಿಲಿಗೆ ಬಂದನು. ಆದರೆ ಹಾಮಾನನು ದುಃಖಪಟ್ಟು ತಲೆಯನ್ನು ಮುಚ್ಚಿಕೊಂಡು ತನ್ನ ಮನೆಗೆ ಶೀಘ್ರವಾಗಿ ಹೋದನು. \v 13 ಆಗ ಹಾಮಾನನು ತನ್ನ ಹೆಂಡತಿಯಾದ ಜೆರೆಷಳಿಗೂ ತನ್ನ ಸಮಸ್ತ ಸ್ನೇಹಿತರಿಗೂ ತನಗೆ ಆದದ್ದನ್ನೆಲ್ಲಾ ವಿವರವಾಗಿ ಹೇಳಿದನು. \p ಆಗ ಅವನ ಸಲಹೆಗಾರರೂ ಹೆಂಡತಿಯಾದ ಜೆರೆಷಳೂ ಅವನಿಗೆ, “ಯಾವನ ಮುಂದೆ ನಿನ್ನ ಬೀಳುವಿಕೆ ಪ್ರಾರಂಭವಾಯಿತೋ, ಆ ಮೊರ್ದೆಕೈ ಯೆಹೂದ್ಯನಾಗಿದ್ದರೆ ನೀನು ಅವನನ್ನು ಜಯಿಸಲಾರೆ. ನಿಶ್ಚಯವಾಗಿ, ನೀನು ಅವನಿಂದ ನಾಶವಾಗುವಿ,” ಎಂದರು. \v 14 ಅವರು ಇನ್ನೂ ಅವನ ಸಂಗಡ ಮಾತನಾಡುತ್ತಿರುವಾಗಲೇ ರಾಜಕಂಚುಕಿಯವರು ಬಂದು, ಎಸ್ತೇರಳು ಏರ್ಪಡಿಸಿದ ಔತಣಕ್ಕೆ ಬೇಗನೆ ಬರಬೇಕೆಂದು ಹಾಮಾನನನ್ನು ಕರೆದರು. \c 7 \s1 ಹಾಮಾನನಿಗೆ ಮರಣಶಿಕ್ಷೆ \p \v 1 ಅರಸನೂ ಹಾಮಾನನೂ ಎಸ್ತೇರ್ ರಾಣಿಯ ಔತಣಕ್ಕೆ ಬಂದರು. \v 2 ಎರಡನೆಯ ದಿವಸ ದ್ರಾಕ್ಷಾರಸವನ್ನು ಪಾನಮಾಡುತ್ತಿರುವಾಗ ಅರಸನು ಮತ್ತೊಮ್ಮೆ ಎಸ್ತೇರಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಏನು? ನಿನ್ನ ಬೇಡಿಕೆ ಏನು? ಅದು ನನ್ನ ರಾಜ್ಯದ ಅರ್ಧವಾಗಿದ್ದರೂ ಸರಿ, ನಾನು ಅದನ್ನು ನಿನಗೆ ಕೊಡುವೆನು,” ಎಂದನು. \p \v 3 ಆಗ ಎಸ್ತೇರ್ ರಾಣಿಯು ಉತ್ತರವಾಗಿ, “ಅರಸನೇ, ನಾನು ನಿನ್ನ ದೃಷ್ಟಿಯಲ್ಲಿ ದಯೆಹೊಂದಿದವಳಾಗಿದ್ದರೆ, ನನ್ನ ಪ್ರಾಣವನ್ನೂ ನನ್ನ ಜನರ ಪ್ರಾಣವನ್ನೂ ಉಳಿಸಬೇಕು. ಇದೇ ನನ್ನ ವಿಜ್ಞಾಪನೆ. ಇದೇ ನನ್ನ ಬೇಡಿಕೆ. \v 4 ಏಕೆಂದರೆ ನಾನು ಮತ್ತು ನನ್ನ ಜನರು ದುರಂತಕ್ಕೂ, ಕೊಲೆಗೂ, ಸರ್ವನಾಶಕ್ಕೂ ಮಾರಟವಾಗಿದ್ದೇವೆ. ಒಂದು ವೇಳೆ, ನಾವು ದಾಸರಾಗಿಯಾಗಲಿ, ದಾಸಿಯರಾಗಲಿ ಮಾರಾಟವಾಗಿದ್ದರೆ ನಾನು ಸುಮ್ಮನಿರುತ್ತಿದ್ದೆ. ಅಂಥ ಕಷ್ಟಕ್ಕಾಗಿ ನಾನು ಅರಸನನ್ನು ತೊಂದರೆಪಡಿಸದೆ ಸುಮ್ಮನೆ ಇದ್ದುಬಿಡುತ್ತಿದ್ದೆನು,” ಎಂದಳು. \p \v 5 ಆಗ ಅರಸನಾದ ಅಹಷ್ವೇರೋಷನು ರಾಣಿಯಾದ ಎಸ್ತೇರಳಿಗೆ, “ಯಾರು ಅವನು? ಈ ಪ್ರಕಾರ ಮಾಡಲು ಧೈರ್ಯಗೊಂಡವನು ಯಾರು? ಅವನು ಎಲ್ಲಿದ್ದಾನೆ?” ಎಂದನು. \p \v 6 ಅದಕ್ಕೆ ಎಸ್ತೇರಳು, “ಆ ವೈರಿಯೂ ಹಗೆಗಾರನೂ ಬೇರೆ ಯಾರೂ ಅಲ್ಲ, ಈ ದುಷ್ಟ ಹಾಮಾನನೇ!” ಎಂದಳು. \p ಆಗ ಹಾಮಾನನು ಅರಸನ ಮುಂದೆಯೂ, ರಾಣಿಯ ಮುಂದೆಯೂ ಬೆಪ್ಪಾದನು. \v 7 ಅರಸನು ಕೋಪಗೊಂಡು ದ್ರಾಕ್ಷಾರಸ ಪಾನಮಾಡುವುದನ್ನು ಬಿಟ್ಟು, ಎದ್ದು ಅರಮನೆಯ ತೋಟಕ್ಕೆ ಹೋದನು. ಆದರೆ ಹಾಮಾನನು ರಾಣಿಯಾದ ಎಸ್ತೇರಳ ಮುಂದೆ ತನ್ನ ಪ್ರಾಣಕ್ಕೋಸ್ಕರ ಬೇಡಿಕೊಳ್ಳುತ್ತಾ ನಿಂತನು. ಏಕೆಂದರೆ ಅರಸನಿಂದ ತನಗೆ ಕೇಡು ನಿರ್ಣಯವಾಯಿತೆಂದು ಅವನಿಗೆ ತಿಳಿದಿತ್ತು. \p \v 8 ಅರಸನು ಅರಮನೆಯ ತೋಟದಿಂದ ದ್ರಾಕ್ಷಾರಸದ ಔತಣ ಸ್ಥಳಕ್ಕೆ ಹಿಂದಿರುಗಿ ಬಂದಾಗ, ಹಾಮಾನನು ಎಸ್ತೇರಳು ಕುಳಿತಿರುವ ಹಾಸಿಗೆಯ ಮೇಲೆ ಬಿದ್ದಿದ್ದನು. \p ಆಗ ಅರಸನು, “ನನ್ನ ಮುಂದೆಯೇ ಇವನು ರಾಣಿಯನ್ನು ಬಲಾತ್ಕಾರ ಮಾಡಬೇಕೆಂದಿರುವನೋ?” ಎಂದನು. \p ಆ ಮಾತು ಅರಸನ ಬಾಯಿಂದ ಹೊರಟ ಕೂಡಲೆ ಸೇವಕರು ಹಾಮಾನನ ಮುಖದ ಮೇಲೆ ಮುಸುಕನ್ನು ಹಾಕಿದರು. \v 9 ಆಗ ರಾಜಕಂಚುಕಿಯರಲ್ಲಿ ಒಬ್ಬನಾದ ಹರ್ಬೋನನು ಅರಸನ ಮುಂದೆ ಬಂದು, “ಇಗೋ, ಅರಸನ ಪ್ರಾಣವನ್ನು ರಕ್ಷಿಸಲು ಮಾತಾಡಿದ ಮೊರ್ದೆಕೈಯನ್ನು ಕೊಲ್ಲುವುದಕ್ಕಾಗಿ ಹಾಮಾನನು ಮಾಡಿಸಿದ ಇಪ್ಪತ್ತೆರಡು ಮೀಟರ್ ಗಲ್ಲುಮರವು ಹಾಮಾನನ ಮನೆಯ ಹತ್ತಿರ ಇದೆ,” ಎಂದನು. \p ಅದಕ್ಕೆ ಅರಸನು, “ಇವನನ್ನು ಅದರಲ್ಲಿ ನೇತುಹಾಕಿರಿ” ಎಂದನು. \v 10 ಅವರು ಮೊರ್ದೆಕೈಗೋಸ್ಕರ ಹಾಮಾನನು ಸಿದ್ಧಮಾಡಿದ್ದ ಅದೇ ಗಲ್ಲುಮರದಲ್ಲಿ ಅವನನ್ನು ನೇತುಹಾಕಿದರು. ಆಗ ಅರಸನ ಕೋಪವು ಶಾಂತವಾಯಿತು. \c 8 \s1 ಯೆಹೂದ್ಯರನ್ನು ಸಂಹರಿಸಬೇಕೆಂಬ ಆಜ್ಞೆಯ ರದ್ದು \p \v 1 ಅದೇ ದಿನದಲ್ಲಿ ಅರಸನಾದ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಸೊತ್ತನ್ನು ರಾಣಿಯಾದ ಎಸ್ತೇರಳಿಗೆ ಕೊಟ್ಟನು. ಇದಲ್ಲದೆ ಮೊರ್ದೆಕೈ ಅರಸನ ಬಳಿಗೆ ಬಂದನು. ಏಕೆಂದರೆ ಮೊರ್ದೆಕೈ ತನಗೆ ಸಂಬಂಧಿಕನು ಎಂದು ಎಸ್ತೇರಳು ತಿಳಿಸಿದ್ದಳು. \v 2 ಆಗ ಅರಸನು ತಾನು ಹಾಮಾನನಿಂದ ತೆಗೆದುಕೊಂಡ ತನ್ನ ಮುದ್ರೆಉಂಗುರವನ್ನು ಮೊರ್ದೆಕೈಗೆ ಕೊಟ್ಟನು. ಇದಲ್ಲದೆ ಎಸ್ತೇರಳು ಮೊರ್ದೆಕೈಯನ್ನು ಹಾಮಾನನ ಸೊತ್ತಿಗೆ ಅಧಿಕಾರಿಯಾಗಿ ನೇಮಿಸಿದಳು. \p \v 3 ಎಸ್ತೇರಳು ಪುನಃ ಅರಸನ ಮುಂದೆ ಹೋಗಿ ಅವನ ಪಾದಗಳ ಮುಂದೆ ಬಿದ್ದು, ಅತ್ತುಕೊಂಡು ಬೇಡಿದಳು. ಅಗಾಗನ ವಂಶದನಾದ ಹಾಮಾನನ ಕೇಡನ್ನೂ ಅವನು ಯೆಹೂದ್ಯರಿಗೆ ವಿರೋಧವಾಗಿ ಯೋಚಿಸಿದ ಯೋಚನೆಯನ್ನೂ ತೆಗೆದುಹಾಕಲು ಬೇಡಿಕೊಂಡಳು. \v 4 ಆಗ ಅರಸನು ಎಸ್ತೇರಳ ಕಡೆಗೆ ಸ್ವರ್ಣದಂಡವನ್ನು ಚಾಚಿದ್ದರಿಂದ, ಎಸ್ತೇರಳು ಎದ್ದು ಅರಸನ ಮುಂದೆ ನಿಂತಳು. \p \v 5 ಅವಳು, “ಅರಸನಿಗೆ ನನ್ನ ಮೇಲೆ ದಯೆಯಿದ್ದರೆ, ಈ ಕಾರ್ಯವು ಅರಸನಿಗೆ ಸರಿ ಎಂದೆಣಿಸಿದರೆ, ಅರಸನು ನನ್ನನ್ನು ಮೆಚ್ಚಿದ್ದರೆ, ಅರಸನ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರನ್ನು ಕೊಂದುಹಾಕುವುದಕ್ಕೆ, ಅಗಾಗನ ವಂಶದ ಹಮ್ಮೆದಾತನ ಮಗ ಹಾಮಾನನು ಬರೆದ ಪತ್ರಗಳನ್ನು ರದ್ದುಗೊಳಿಸಲು ಆಜ್ಞೆ ಹೊರಡಿಸಬೇಕು. \v 6 ನನ್ನ ಜನರಿಗೆ ಕೇಡು ಸಂಭವಿಸುವುದನ್ನು ನೋಡಿ ನಾನು ಹೇಗೆ ಸಹಿಸಲಿ? ಇಲ್ಲವೆ ನನ್ನ ಕುಟುಂಬದ ನಾಶವನ್ನು ನಾನು ನೋಡಿ ಹೇಗೆ ಸಹಿಸಲಿ?” ಎಂದಳು. \p \v 7 ಆಗ ಅರಸನಾದ ಅಹಷ್ವೇರೋಷನು ಎಸ್ತೇರ್ ರಾಣಿಗೂ ಯೆಹೂದ್ಯನಾದ ಮೊರ್ದೆಕೈಗೂ ಹೇಳಿದ್ದೇನೆಂದರೆ, “ಇಗೋ, ಹಾಮಾನನು ಯೆಹೂದ್ಯರ ವಿರುದ್ಧ ಕೈಯೆತ್ತಿದ್ದರಿಂದ ಅವನ ಸೊತ್ತನ್ನು ಎಸ್ತೇರಳಿಗೆ ಕೊಟ್ಟೆನು. ಹಾಮಾನನನ್ನು ಗಲ್ಲಿಗೆ ಹಾಕಿದ್ದಾರೆ. \v 8 ಈಗ ನೀವು ಯೆಹೂದ್ಯರಿಗೋಸ್ಕರ ಅರಸನ ಹೆಸರಿನಿಂದ ನಿಮ್ಮ ದೃಷ್ಟಿಗೆ ಒಳ್ಳೆಯದಾಗಿ ತೋರುವ ಹಾಗೆ ಬೇರೆ ಒಂದು ಪತ್ರವನ್ನು ಬರೆದು, ಅರಸನ ಉಂಗುರದಿಂದ ಮುದ್ರೆಹಾಕಿರಿ. ಏಕೆಂದರೆ ಅರಸನ ಹೆಸರಿನಿಂದ ಬರೆಯಲಾದ ಹಾಗು ರಾಜಮುದ್ರೆಯನ್ನು ಹೊಂದಿರುವ ಲೇಖನವನ್ನು ಯಾರೂ ಈಗ ರದ್ದುಮಾಡಲಾಗದು,” ಎಂದು ಹೇಳಿದನು. \p \v 9 ಆಗ ಮೂರನೆಯ ತಿಂಗಳಾದ ಸಿವಾನ್ ಎಂಬ ಮಾಸದ ಇಪ್ಪತ್ತಮೂರನೆಯ ದಿನದಲ್ಲಿ ಅರಸನ ಲೇಖಕರನ್ನು ಕರೆಯಲಾಯಿತು. ಮೊರ್ದೆಕೈ ಆಜ್ಞಾಪಿಸಿದ ಎಲ್ಲಾದರ ಪ್ರಕಾರ, ಸಕಲ ಯೆಹೂದ್ಯರಿಗೂ ಹಿಂದೂ ದೇಶ ಮೊದಲುಗೊಂಡು ಇಥಿಯೋಪಿಯ ದೇಶದವರೆಗೂ ಇರುವ ನೂರ ಇಪ್ಪತ್ತೇಳು ಪ್ರಾಂತಗಳ ಉಪರಾಜರಿಗೂ, ದೇಶಾಧಿಪತಿಗಳಿಗೂ, ಅಧಿಕಾರಿಗಳಿಗೂ, ಅವರವರ ಪ್ರಾಂತದ ಲಿಪಿಯಲ್ಲಿಯೂ, ಅವರವರ ಭಾಷೆಯಲ್ಲಿಯೂ ಪತ್ರಗಳನ್ನು ಬರೆಯಲಾಯಿತು. \v 10 ಮೊರ್ದೆಕೈ ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆದ ಪತ್ರಗಳಿಗೆ ಅರಸನ ಉಂಗುರದಿಂದ ಮುದ್ರೆಹಾಕಿ, ಸವಾರಿ ಕುದುರೆಗಳನ್ನು ಹತ್ತಿಕೊಂಡಿದ್ದ ಅಂಚೆಯವರ ಮೂಲಕ ವೇಗವಾಗಿ ಕಳುಹಿಸಿದನು. \p \v 11 ಅರಸನಾದ ಅಹಷ್ವೇರೋಷನ ಆಜ್ಞೆಯ ಪ್ರಕಾರ, ಸಮಸ್ತ ಪ್ರಾಂತಗಳ ಆಯಾ ಪಟ್ಟಣಗಳಲ್ಲಿರುವ ಎಲ್ಲಾ ಯೆಹೂದ್ಯರು ಒಟ್ಟಾಗಿ ಸೇರಿ ಪ್ರಾಣರಕ್ಷಣೆ ಮಾಡಿಕೊಳ್ಳುವ ಹಕ್ಕನ್ನು ಕೊಡಲಾಗಿತ್ತು. ಯಾವುದೇ ದೇಶದವರು ಅಥವಾ ಪ್ರಾಂತದವರು ಆಯುಧಗಳೊಡನೆ ಅವರಿಗೆ ವಿರೋಧವಾಗಿ ಎದ್ದು ಅವರನ್ನಾಗಲಿ, ಅವರ ಮಹಿಳೆಯರನ್ನಾಗಲಿ, ಅವರ ಮಕ್ಕಳನ್ನಾಗಲಿ ದಾಳಿಮಾಡಲು ಬಂದರೆ, ಅಂಥವರನ್ನು ಕೊಂದುಹಾಕುವುದಕ್ಕೂ ನಾಶಮಾಡುವುದಕ್ಕೂ ವೈರಿಯ ಆಸ್ತಿಯನ್ನು ಕೊಳ್ಳೆ ಹೊಡೆಯುವುದಕ್ಕೂ ಅಧಿಕಾರಕೊಡಲಾಗಿತ್ತು. \v 12 ಅರಸನಾದ ಅಹಷ್ವೇರೋಷನ ಸಮಸ್ತ ಪ್ರಾಂತಗಳ ಆಯಾ ಪಟ್ಟಣಗಳಲ್ಲಿರುವ ಎಲ್ಲಾ ಯೆಹೂದ್ಯರು ಇದನ್ನು ಮಾಡಲು ನೇಮಿಸಿದ ದಿನವು, ಹನ್ನೆರಡನೆಯ ತಿಂಗಳಾದ ಆದಾರ್ ಮಾಸದ ಹದಿಮೂರನೆಯ ದಿನವಾಗಿತ್ತು. \v 13 ಯೆಹೂದ್ಯರು ತಮ್ಮ ಶತ್ರುಗಳ ಮೇಲೆ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು, ಅವರು ಆ ದಿನ ಸಿದ್ಧವಾಗಿರಬೇಕೆಂದು ಈ ಆಜ್ಞಾಪತ್ರದ ಪ್ರತಿಯು ಪ್ರಾಂತ ಪ್ರಾಂತಗಳಲ್ಲಿ ಕಾನೂನಾಗಿ ಸಕಲ ದೇಶದವರಿಗೂ ಸಾರಿ ಹೇಳಲಾಗಿತ್ತು. \p \v 14 ಅಂಚೆಯವರು ಅರಸನ ಆಜ್ಞೆಯಿಂದ ಪ್ರೇರಿತರಾಗಿ ಅರಮನೆಯ ಕುದುರೆಗಳ ಮೇಲೆ ಅತಿ ಶೀಘ್ರವಾಗಿ ಹೊರಟರು. ಈ ಆಜ್ಞೆಯು ಶೂಷನ್ ನಗರದ ಅರಮನೆಯಲ್ಲಿ ಕೊಡಲಾಗಿತ್ತು. \s1 ಯೆಹೂದ್ಯರ ವಿಜಯ ಮಹೋತ್ಸವ \p \v 15 ಮೊರ್ದೆಕೈ ಶುಭ್ರವಾದ ನೀಲ ರಾಜವಸ್ತ್ರವನ್ನು ಧರಿಸಿ, ಬಂಗಾರದ ದೊಡ್ಡ ಕಿರೀಟವನ್ನು ಇಟ್ಟುಕೊಂಡು, ರಕ್ತವರ್ಣವುಳ್ಳ ನಯವಾದ ನಾರಿನ ಶಾಲನ್ನು ಹೊದ್ದುಕೊಂಡು ಅರಸನ ಸಮ್ಮುಖದಿಂದ ಹೊರಟುಹೋದನು. ಶೂಷನ್ ಪಟ್ಟಣವು ಸಂಭ್ರಮವೂ ಸಂತೋಷವೂ ಉಳ್ಳದ್ದಾಗಿತ್ತು. \v 16 ಯೆಹೂದ್ಯರಿಗೆ ಬೆಳಕೂ ಸಂತೋಷವೂ ಆನಂದವೂ ಘನವೂ ಉಂಟಾಗಿದ್ದವು. \v 17 ಅರಸನ ಆಜ್ಞೆಯು ಪ್ರಕಟವಾದ ಪ್ರತಿ ಪ್ರಾಂತದಲ್ಲಿಯೂ ಪ್ರತಿ ಪಟ್ಟಣದಲ್ಲಿಯೂ ಯೆಹೂದ್ಯರಿಗೆ ಸಂತೋಷವೂ ಆನಂದವೂ ಸಂಭ್ರಮವೂ ಸುದಿನವೂ ಉಂಟಾಗಿದ್ದವು. ಇದಲ್ಲದೆ ಇತರ ದೇಶಗಳ ಅನೇಕ ಜನರು ಯೆಹೂದ್ಯರಾದರು. ಯೆಹೂದ್ಯರ ಭಯವು ಅವರ ಮೇಲೆ ಇತ್ತು. \c 9 \p \v 1 ಹನ್ನೆರಡನೆಯ ತಿಂಗಳಾದ ಆದಾರ್ ತಿಂಗಳೆಂಬ ಹದಿಮೂರನೆಯ ದಿನದಲ್ಲಿ ಅರಸನ ಆಜ್ಞೆಯು ನೆರವೇರುವುದಕ್ಕೆ ನಿರ್ಣಯವಾಗಿತ್ತು. ಯೆಹೂದ್ಯರ ಶತ್ರುಗಳು ಅದೇ ದಿನದಲ್ಲಿ ಅವರ ಮೇಲೆ ದೊರೆತನ ಮಾಡುವುದಾಗಿ ಎದುರುನೋಡಿದ್ದರು. ಅದಕ್ಕೆ ಬದಲಾಗಿ ಯೆಹೂದ್ಯರೇ ತಮ್ಮನ್ನು ಹಗೆಮಾಡುವವರ ಮೇಲೆ ದೊರೆತನ ಮಾಡಲಾರಂಭಿಸಿದರು. \v 2 ಅದೇ ದಿನದಲ್ಲಿ ಅರಸನಾದ ಅಹಷ್ವೇರೋಷನ ಸಮಸ್ತ ಪ್ರಾಂತಗಳಲ್ಲಿರುವ ತಮ್ಮ ತಮ್ಮ ಪಟ್ಟಣಗಳಲ್ಲಿ ಯೆಹೂದ್ಯರು ತಮ್ಮನ್ನು ಕೊಲ್ಲಲು ಹುಡುಕುವವರ ಮೇಲೆ ದಾಳಿಮಾಡಲು ಒಟ್ಟಾಗಿ ಸೇರಿದರು. ಆಗ ಯೆಹೂದ್ಯರ ಭಯವು ಸಮಸ್ತ ಜನರ ಮೇಲೆ ಇದ್ದುದರಿಂದ ಅವರ ಮುಂದೆ ನಿಲ್ಲುವವನು ಒಬ್ಬನೂ ಇರಲಿಲ್ಲ. \v 3 ಇದಲ್ಲದೆ ಪ್ರಾಂತಗಳ ಉಪರಾಜರೂ, ಪ್ರತಿನಿಧಿಗಳೂ, ಅಧಿಪತಿಗಳೂ, ಅರಸನ ಕೆಲಸದವರೂ ಯೆಹೂದ್ಯರಿಗೆ ಸಹಾಯ ಮಾಡಿದರು. ಏಕೆಂದರೆ ಮೊರ್ದೆಕೈಯ ಭಯ ಅವರಿಗಿತ್ತು. \v 4 ಏಕೆಂದರೆ ಮೊರ್ದೆಕೈ ಅರಮನೆಯಲ್ಲಿ ಪ್ರಮುಖನಾಗಿದ್ದನು. ಅವನ ಕೀರ್ತಿಯು ಸಮಸ್ತ ಪ್ರಾಂತಗಳಿಗೂ ಹರಡಿತು. ಈ ಮೊರ್ದೆಕೈ ಅಧಿಕವಾಗಿ ಅಧಿಕಾರವಂತನಾದನು. \p \v 5 ಹೀಗೆ ಯೆಹೂದ್ಯರು ತಮ್ಮ ಶತ್ರುಗಳೆಲ್ಲರನ್ನು ಸೋಲಿಸಿ, ಖಡ್ಗದಿಂದ ಸಂಹರಿಸಿದರು. ತಮ್ಮನ್ನು ಹಗೆಮಾಡುತ್ತಿದ್ದವರಿಗೆ ತಮ್ಮ ಇಷ್ಟ ಬಂದ ಹಾಗೆ ಮಾಡಿದರು. \v 6 ಶೂಷನಿನ ಅರಮನೆಯಲ್ಲಿ ಯೆಹೂದ್ಯರು ಐನೂರು ಮಂದಿಗೆ ಮರಣದಂಡನೆ ವಿಧಿಸಿದರು. \v 7 ಇದಲ್ಲದೆ ಪರ್ಷಂದಾತನು ದಲ್ಫೋನನು, ಅಸ್ಪಾತನು, \v 8 ಪೊರಾತನು, ಅದಲ್ಯನು, ಅರಿದಾತನು, \v 9 ಪರ್ಮಷ್ಟನು, ಅರಿಸಾಯನು, ಅರಿದಾಯನು, ವೈಜಾತನು ಎಂಬವರನ್ನು ಕೊಂದರು. \v 10 ಇವರು ಯೆಹೂದ್ಯರ ವೈರಿಯಾದ ಹಮ್ಮೆದಾತನ ಮಗ ಹಾಮಾನನ ಹತ್ತು ಮಂದಿ ಪುತ್ರರು. ಆದರೆ ಅವರು ಇವರ ಸುಲಿಗೆಯನ್ನು ತೆಗೆದುಕೊಳ್ಳಲಿಲ್ಲ. \p \v 11 ಅದೇ ದಿವಸ ಶೂಷನಿನ ಅರಮನೆಯಲ್ಲಿ ಮರಣದಂಡನೆಯಾದವರ ಲೆಕ್ಕವು ಅರಸನ ಮುಂದೆ ಒಪ್ಪಿಸಲಾಯಿತು. \v 12 ಆಗ ಅರಸನು ಎಸ್ತೇರ್ ರಾಣಿಗೆ, “ಯೆಹೂದ್ಯರು ಶೂಷನಿನ ಅರಮನೆಯಲ್ಲಿ ಐನೂರು ಮಂದಿಯನ್ನೂ ಹಾಮಾನನ ಹತ್ತು ಮಕ್ಕಳನ್ನೂ ಸಂಹರಿಸಿದ್ದಾರೆ. ಅವರು ಅರಸನ ಮಿಕ್ಕಾದ ಪ್ರಾಂತಗಳಲ್ಲಿ ಏನು ಮಾಡಿರಬಹುದೋ? ಈಗ ನಿನ್ನ ವಿಜ್ಞಾಪನೆ ಏನು? ಅದು ನಿನಗೆ ಕೊಡಲಾಗುವುದು. ಇನ್ನೂ ನಿನ್ನ ಬೇಡಿಕೆ ಏನು? ಅದು ಮಾಡಲಾಗುವುದು,” ಎಂದು ಹೇಳಿದನು. \p \v 13 ಅದಕ್ಕೆ ಎಸ್ತೇರಳು, “ಅರಸನಿಗೆ ಸಮ್ಮತಿಯಾದರೆ, ಇಂದಿನಂತೆಯೇ ರಾಜಾಜ್ಞೆಯು ನಾಳೆಯೂ ಶೂಷನ್ ಪಟ್ಟಣದಲ್ಲಿ ಜಾರಿಗೆ ಬರಲು ಯೆಹೂದ್ಯರಿಗೆ ಅಪ್ಪಣೆ ಆಗಲಿ. ಹಾಮಾನನ ಹತ್ತು ಮಂದಿ ಮಕ್ಕಳ ಶವಗಳನ್ನು ಗಲ್ಲಿಗೇರಿಸುವಂತೆ ಅಪ್ಪಣೆಯಾಗಲಿ,” ಎಂದಳು. \p \v 14 ಆಗ ಅರಸನು ಹಾಗೆಯೇ ಮಾಡಲು ಆಜ್ಞಾಪಿಸಿದನು. ಆ ಆಜ್ಞೆಯು ಶೂಷನಿನಲ್ಲಿ ಜಾರಿಗೆಬಂದಾಗ ಅವರು ಹಾಮಾನನ ಹತ್ತು ಮಂದಿ ಪುತ್ರರ ಶವವನ್ನು ಗಲ್ಲಿಗೆ ಹಾಕಿದರು. \v 15 ಇದಲ್ಲದೆ ಶೂಷನಿನಲ್ಲಿರುವ ಯೆಹೂದ್ಯರು ಆದಾರ್ ಎಂಬ ಫಾಲ್ಗುನಮಾಸದ ಹದಿನಾಲ್ಕನೆಯ ದಿವಸದಲ್ಲಿ ಶೂಷನಿನಲ್ಲಿ ಒಟ್ಟಾಗಿ ಸೇರಿ ಮುನ್ನೂರು ಮಂದಿಗೆ ಮರಣದಂಡನೆಯನ್ನು ವಿಧಿಸಿದರು. ಆದರೆ ಅವರು ಸುಲಿಗೆಯನ್ನು ತೆಗೆದುಕೊಳ್ಳಲಿಲ್ಲ. \p \v 16 ಅರಸನ ಪ್ರಾಂತಗಳಲ್ಲಿರುವ ಮಿಕ್ಕ ಯೆಹೂದ್ಯರು ತಮ್ಮ ಪ್ರಾಣ ರಕ್ಷಣೆಗಾಗಿ ಎದ್ದು ನಿಂತು, ತಮ್ಮ ಶತ್ರುಗಳ ಕಾಟದಿಂದ ವಿಶ್ರಾಂತಿ ಪಡೆಯುವಂತೆ ಒಟ್ಟಾಗಿ ಸೇರಿದರು. ಅವರು ತಮ್ಮ ವೈರಿಗಳಲ್ಲಿ 75,000 ಮಂದಿಗೆ ಮರಣದಂಡನೆ ವಿಧಿಸಿದರು. ಆದರೆ ಅವರ ಸುಲಿಗೆಯನ್ನು ತೆಗೆದುಕೊಳ್ಳಲಿಲ್ಲ. \v 17 ಆದಾರ್ ಮಾಸದ ಹದಿಮೂರನೆಯ ದಿನ ಈ ಘಟನೆ ನಡೆಯಿತು. ಹದಿನಾಲ್ಕನೆಯ ದಿನದಂದು ಅವರು ವಿಶ್ರಮಿಸಿಕೊಂಡು, ಅದನ್ನು ಸಂಭ್ರಮದ ಉತ್ಸವದಿನವನ್ನಾಗಿ ಆಚರಿಸಿದರು. \p \v 18 ಆದರೆ ಶೂಷನಿನಲ್ಲಿದ್ದ ಯೆಹೂದ್ಯರು ಹದಿಮೂರನೆಯ ಹಾಗೂ ಹದಿನಾಲ್ಕನೆಯ ದಿನಗಳಲ್ಲಿ ಒಟ್ಟಾಗಿ ಸೇರಿಬಂದದ್ದರಿಂದ, ಹದಿನೈದನೆಯ ದಿನದಲ್ಲಿ ಅವರು ವಿಶ್ರಮಿಸಿಕೊಂಡು, ಅದೇ ದಿನವನ್ನು ಸಂಭ್ರಮದ ಉತ್ಸವದಿನವನ್ನಾಗಿ ಆಚರಿಸಿದರು. \p \v 19 ಆದಕಾರಣ ಗ್ರಾಮಗಳಲ್ಲಿಯೂ ಬಯಲು ಪ್ರಾಂತಗಳ ಪಟ್ಟಣಗಳಲ್ಲಿಯೂ ವಾಸವಾಗಿರುವ ಯೆಹೂದ್ಯರು ಆದಾರ್ ಮಾಸದ ಹದಿನಾಲ್ಕನೆಯ ದಿನವನ್ನು ಶುಭದಿನವಾಗಿಯೂ, ಸಂಭ್ರಮದ ದಿನವಾಗಿಯೂ, ಒಬ್ಬರಿಗೊಬ್ಬರು ಭೋಜನ ಕೊಡುಗೆಗಳನ್ನು ಕಳುಹಿಸುವ ದಿನವಾಗಿಯೂ ಆಚರಿಸಿದರು. \s1 ಪೂರಿಮ್ ಹಬ್ಬ \p \v 20 ಮೊರ್ದೆಕೈಯು ಈ ಘಟನೆಗಳನ್ನು ಬರೆದು ಅರಸನಾದ ಅಹಷ್ವೇರೋಷನ ಸಕಲ ಪ್ರಾಂತಗಳಲ್ಲಿ ಸಮೀಪದಲ್ಲಿಯೂ ದೂರದಲ್ಲಿಯೂ ಇದ್ದ ಯೆಹೂದ್ಯರು ಎಲ್ಲರಿಗೂ ಪತ್ರಗಳ ಮುಖಾಂತರ ಕಳುಹಿಸಿದನು. \v 21 ಯೆಹೂದ್ಯರು ಆದಾರ್ ಮಾಸದ ಹದಿನಾಲ್ಕನೆ ಮತ್ತು ಹದಿನೈದನೆ ದಿನಗಳನ್ನೂ ಪ್ರತಿವರ್ಷ ಹಬ್ಬದ ದಿನಗಳಾಗಿ ಆಚರಿಸುವುದು ಶಾಶ್ವತ ನಿಯಮವೆಂದು ಭಾವಿಸುವಂತೆ ಆ ಪತ್ರದಲ್ಲಿ ಬರೆಯಲಾಗಿತ್ತು. \v 22 ಆ ದಿನಗಳಲ್ಲಿ ಯೆಹೂದ್ಯರು ತಮ್ಮ ಶತ್ರುಗಳ ಕಾಟದಿಂದ ವಿಶ್ರಾಂತಿ ಪಡೆದ ಕಾಲವಾಗಿಯೂ, ಅವರ ದುಃಖ ಸಂತೋಷವೂ, ಗೋಳಾಟ ಉತ್ಸವವೂ ಬದಲಾದ ದಿನವಾಗಿಯೂ ಕೊಂಡಾಡುವಂತೆ ಆ ಪತ್ರದಲ್ಲಿ ಬರೆದಿತ್ತು. ಆದ್ದರಿಂದ ಆ ದಿನ ಸಂಭ್ರಮದ ದಿನವಾಗಿಯೂ, ಒಬ್ಬರಿಗೊಬ್ಬರು ಭೋಜನ ಕೊಡುಗೆಗಳನ್ನು ಕಳುಹಿಸುವ ದಿನವಾಗಿಯೂ, ಬಡವರಿಗೆ ದಾನಗಳನ್ನು ಮಾಡುವ ದಿನವಾಗಿಯೂ ಪಾಲಿಸಬೇಕೆಂದೂ ಆ ಪತ್ರದಲ್ಲಿ ಬರೆದಿತ್ತು. \p \v 23 ಆದ್ದರಿಂದ ಯೆಹೂದ್ಯರು ಮೊರ್ದೆಕೈಯು ತಮಗೆ ಬರೆದ ಪ್ರಕಾರವಾಗಿ, ತಾವು ಆರಂಭಮಾಡಿದ್ದ ಸಂಭ್ರಮವನ್ನು ಮುಂದುವರಿಸಲು ಒಪ್ಪಿಕೊಂಡರು. \v 24 ಏಕೆಂದರೆ ಸಮಸ್ತ ಯೆಹೂದ್ಯರಿಗೂ ಕಡು ವೈರಿಯಾದ, ಅಗಾಗನ ವಂಶದ, ಹಮ್ಮೆದಾತನ ಮಗನಾದ ಹಾಮಾನನು ಯೆಹೂದ್ಯರನ್ನು ಸಂಹರಿಸಬೇಕೆಂದು ತೀರ್ಮಾನಿಸಿಕೊಂಡು ಅವರನ್ನು ಹಾಳುಮಾಡಲು, ನಿರ್ನಾಮಗೊಳಿಸಲು \tl ಪೂರ್\tl* ಅಂದರೆ, ಚೀಟನ್ನು ಹಾಕಿದ್ದನು. \v 25 ಆದರೆ ಈ ಒಳಸಂಚು ಅರಸನಿಗೆ ತಿಳಿದುಬಂದಾಗ ಹಾಮಾನನು ಯೆಹೂದ್ಯರಿಗೆ ವಿರೋಧವಾಗಿ ಯೋಚಿಸಿದ ದುರಾಲೋಚನೆಯು ಅವನ ತಲೆಯ ಮೇಲೆ ಬರುವಂತೆ ಅರಸನು ಆಜ್ಞೆಯನ್ನು ಹೊರಡಿಸಿದನು. ಅದರೊಂದಿಗೆ ಅವನ ಮಕ್ಕಳನ್ನೂ ಗಲ್ಲಿಗೇರಿಸಲು ಅರಸನು ಆಜ್ಞಾಪಿಸಿದ್ದನು; \v 26 ಆದ್ದರಿಂದ \tl ಪೂರ್\tl* ಎಂಬ ಪದದ ಆಧಾರದ ಮೇಲೆ ಆ ದಿನಗಳಿಗೆ ಪೂರಿಮ್ ಎಂಬ ಹೆಸರಾಯಿತು. ಅರಸನು ಪತ್ರದಲ್ಲಿ ಬರೆದ ಎಲ್ಲಾ ಮಾತುಗಳನ್ನೂ, ಅವುಗಳ ಸಂಬಂಧವಾಗಿ ತಾವು ಅನುಭವಿಸಿದ್ದನ್ನೂ, ತಮಗೆ ಸಂಭವಿಸಿದ್ದನ್ನೂ \v 27 ಯೆಹೂದ್ಯರು ಸ್ಮರಿಸಿಕೊಂಡು ಪ್ರತಿವರ್ಷವೂ ಆ ಎರಡು ದಿನಗಳನ್ನು, ಅವುಗಳಿಗೆ ಸಂಬಂಧಪಟ್ಟ ಶಾಸನದ ಪ್ರಕಾರ, ನಿಯಮಿತ ಕಾಲದಲ್ಲಿ ಆಚರಿಸುವಂತೆ ತಮ್ಮಲ್ಲಿಯೂ ತಮ್ಮ ಸಂತಾನದವರಲ್ಲಿಯೂ ತಮ್ಮೊಂದಿಗೆ ಸೇರಿಕೊಳ್ಳುವವರಲ್ಲಿಯೂ ಯಾವ ವಿಧದಲ್ಲಿಯೂ ಮೀರಕೂಡದ ಪದ್ಧತಿಯನ್ನಾಗಿ ಪಾಲಿಸಲು ತೀರ್ಮಾನಿಸಿದರು. \v 28 ಇದಲ್ಲದೆ ಈ ಎರಡು ದಿನಗಳನ್ನು ಪ್ರತಿ ಪ್ರಾಂತದಲ್ಲಿಯೂ ಪ್ರತಿ ಪಟ್ಟಣದಲ್ಲಿಯೂ, ಪ್ರತಿ ತಲೆಮಾರಿನಲ್ಲಿಯೂ, ಪ್ರತಿ ಕುಟುಂಬದಲ್ಲಿಯೂ ಸ್ಮರಿಸಿ ಆಚರಿಸಬೇಕು. ಈ ಪೂರಿಮ್ ದಿನಗಳು ಯೆಹೂದ್ಯರಲ್ಲಿ ಎಂದಿಗೂ ನಿಂತುಹೋಗಬಾರದು. ಅವರ ಸಂತಾನದವರಲ್ಲಿ ಅವುಗಳ ಜ್ಞಾಪಕವು ಅಳಿದು ಹೋಗಬಾರದು ಎಂದೂ ತೀರ್ಮಾನಿಸಿಕೊಂಡರು. \p \v 29 ಆಗ ಅಬೀಹೈಲನ ಮಗಳಾದ ಎಸ್ತೇರ್ ರಾಣಿಯೂ, ಈ ಪೂರಿಮ್ ದಿನವನ್ನು ಸ್ಥಿರಪಡಿಸುವುದಕ್ಕಾಗಿ ಯೆಹೂದ್ಯನಾದ ಮೊರ್ದೆಕೈಯ ಸಹಾಯದಿಂದ ಎರಡನೆಯ ಪತ್ರವನ್ನು ಪೂರ್ಣ ಅಧಿಕಾರದಿಂದ ಬರೆದಳು. \v 30 ಮೊರ್ದೆಕೈಯೂ ದಯೆ ಹಾಗೂ ಭರವಸೆಯ ಮಾತುಗಳಿಂದ ಅಹಷ್ವೇರೋಷನ ರಾಜ್ಯದ ನೂರ ಇಪ್ಪತ್ತೇಳು ಪ್ರಾಂತಗಳಲ್ಲಿರುವ ಸಮಸ್ತ ಯೆಹೂದ್ಯರಿಗೆ ಪತ್ರಗಳನ್ನು ಕಳುಹಿಸಿದನು. \v 31 ಇದಲ್ಲದೆ ಈ ಪೂರಿಮ್ ದಿನಗಳನ್ನು ಯೆಹೂದ್ಯನಾದ ಮೊರ್ದೆಕೈಯೂ ರಾಣಿಯಾದ ಎಸ್ತೇರಳೂ ಎಲ್ಲಾ ಯೆಹೂದ್ಯರಿಗೂ, ಅವರ ಸಂತಾನದವರಿಗೂ ಉಪವಾಸ ಮಾಡಿ, ದುಃಖಿಸುವ ಕಾಲವನ್ನು ಸ್ಥಿರಪಡಿಸಿದ ಪ್ರಕಾರವೇ ಈ ಪೂರಿಮ್ ದಿನವನ್ನು ಸ್ಥಿರಪಡಿಸುವುವಂತೆ ಆಜ್ಞಾಪಿಸಿದ್ದರು. \v 32 ಹೀಗೆಯೇ ಎಸ್ತೇರಳ ಆಜ್ಞೆಯು ಈ ಪೂರಿಮ್ ದಿವಸಗಳ ಕಾರ್ಯಗಳನ್ನು ಸ್ಥಿರಪಡಿಸಿದ್ದರಿಂದ ಅದು ಗ್ರಂಥದಲ್ಲಿ ಬರೆಯಲಾಯಿತು. \c 10 \s1 ಮೊರ್ದೆಕೈ ಶ್ರೇಷ್ಠತೆ \p \v 1 ಅರಸನಾದ ಅಹಷ್ವೇರೋಷನು ದೇಶದ ಮೇಲೆಯೂ ಸಮುದ್ರದ ದ್ವೀಪಗಳ ಮೇಲೆಯೂ ತೆರಿಗೆಯನ್ನು ನೇಮಿಸಿದನು. \v 2 ಅವನ ಅಧಿಕಾರದ ಕ್ರಿಯೆಗಳೂ ಅವನ ಪರಾಕ್ರಮವೂ ಅರಸನು ಮೊರ್ದೆಕೈಯನ್ನು ಹೆಚ್ಚಿಸಿದ ಮಹತ್ತಿನ ಪ್ರಸಿದ್ಧಿಯೂ ಮೇದ್ಯ ಮತ್ತು ಪಾರಸಿಯ ಅರಸರ ಇತಿಹಾಸಗಳ ಗ್ರಂಥದಲ್ಲಿ ಬರೆದಿರುತ್ತವೆ. \v 3 ಯೆಹೂದ್ಯನಾದ ಮೊರ್ದೆಕೈ ಅರಸನಾದ ಅಹಷ್ವೇರೋಷನಿಗೆ ಎರಡನೆಯವನೂ ಯೆಹೂದ್ಯರಲ್ಲಿ ಸನ್ಮಾನಿತನೂ ತನ್ನ ಸಹೋದರರ ಸಮೂಹದಲ್ಲಿ ಹೆಚ್ಚಿನ ಗೌರವ ಪಾತ್ರನೂ ತನ್ನ ಜನರ ಹಿತಚಿಂತಕನೂ ತನ್ನ ಸಂತಾನದವರಿಗೆ ಕ್ಷೇಮಾಭಿವೃದ್ಧಿಯನ್ನು ಮಾತನಾಡುವವನೂ ಆಗಿದ್ದನು.